ರಾಜ್ಯ

ಇನ್ಫೋಸಿಸ್ ನಾರಾಯಣಮೂರ್ತಿ ಸೇರಿ ಮೂವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ: ಅಶ್ವತ್ಥ ನಾರಾಯಣ

Nagaraja AB

ಬೆಂಗಳೂರು: ಇನ್ಫೋಸಿಸ್ ನಾರಾಯಣಮೂರ್ತಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಉನ್ನತ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಸದಾಶಿವನಗರದಲ್ಲಿಂದು ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥ ನಾರಾಯಣ, ಸೋಮವಾರ ನಾಡಪ್ರಭು ಕೆಂಪೇಗೌಡರ ಜನ್ಮ ದಿನ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮೂವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲು ಸರ್ಕಾರ ಉದ್ದೇಶಿಸಿದೆ. ಅದಕ್ಕಾಗಿ ಅವರಿಗೆ ತಿಳಿಸಲು ಬಂದಿದ್ದೇನೆ ಎಂದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಕುರಿತು ಮಾತನಾಡಿದ ಸಚಿವರು, ಪ್ರತಿಮೆ ಕಾಮಗಾರಿ ಬಹುತೇಕ ಮುಗಿದಿದೆ. ಲ್ಯಾಂಡ್ ಸ್ಕೇಪಿಂಗ್ ಆಗಬೇಕಿದೆ. ಅದು ಕೂಡಾ ಶೀಘ್ರವೇ ಪೂರ್ಣವಾಗಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಉದ್ಘಾಟನೆ ಆಗಲಿದೆ. ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದಿಂದ ಎಲ್ಲ ರೀತಿಯ ವ್ಯವಸ್ಥೆ ಆಗುತ್ತಿದೆ ಎಂದು ಅವರು ತಿಳಿಸಿದರು.

ಕೆಂಪೇಗೌಡರು ಹುಟ್ಟಿದ ಕೆಂಪಾಪುರ, ಮಾಗಡಿ ಕೋಟೆಯನ್ನೂ ಕೂಡಾ ಅಭಿವೃದ್ಧಿ ಮಾಡಲಾಗುತ್ತಿದ್ದು, ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಹಕಾರ ಕೂಡಾ ಪಡೆದಿದ್ದೇವೆ. ಶೀಘ್ರವೇ ಕೆಂಪೇಗೌಡರಿಗೆ ಸಂಬಂಧಿಸಿದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವುದಾಗಿ ಸಚಿವರು ಹೇಳಿದರು.

SCROLL FOR NEXT