ರಾಜ್ಯ

ಮಂಗಳೂರು: ಗಮನ ಸೆಳೆಯಲು ಕೋಮು ದಾಳಿಯ ಕಥೆ ಕಟ್ಟಿದ ಬಾಲಕ!

Lingaraj Badiger

ಮಂಗಳೂರು: ಸುರತ್ಕಲ್‌ನ ಮದರಸಾದಿಂದ ಸೋಮವಾರ ರಾತ್ರಿ ಮಂಗಳೂರಿಗೆ ವಾಪಸಾಗುತ್ತಿದ್ದ ತನ್ನ ಮೇಲೆ ಅನ್ಯ ಧರ್ಮದ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ 13 ವರ್ಷದ ಬಾಲಕ, ಜನರ ಗಮನ ಸೆಳೆಯಲು ತಾನು ಈ ಕಥೆ ಹೆಣೆದಿರುವುದಾಗಿ ಗುರುವಾರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. 

ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾತನಾಡಿ, ಬಾಲಕನ ಮೇಲೆ ಯಾರಿಂದಲೂ ಹಲ್ಲೆ ನಡೆದಿಲ್ಲ ಮತ್ತು ಆತ ಪೆನ್ನು ಬಳಸಿ ತನ್ನ ಶರ್ಟ್ ಹರಿದು ಹಾಕಿದ್ದಾನೆ. ಆತನ ಆರಂಭಿಕ ಹೇಳಿಕೆ ಆಧರಿಸಿ ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಸಾಂದರ್ಭಿಕ ಪುರಾವೆಗಳನ್ನು ಪರಿಶೀಲಿಸಿದಾಗ ದಾಳಿಯ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಹೀಗಾಗಿ ಆ ಬಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಸತ್ಯ ಬಹಿರಂಗವಾಗಿದೆ.

ಬಡ ಕುಟುಂಬದಿಂದ ಬಂದಿರುವ ಬಾಲಕ ತನ್ನ ಬಗ್ಗೆ ಕೀಳಿರಿಮೆ ಹೊಂದಿದ್ದಾನೆ. ಮನೆ ಮತ್ತು ಶಾಲೆ ಎರಡರಲ್ಲೂ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಇದ್ದು, ಇತರರ ಗಮನ ಸೆಳೆಯಲು ಹಲ್ಲೆಯ ಕಥೆ ಕಟ್ಟಿದ್ದಾನೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಹಾಗೂ ವೈದ್ಯರ ಮುಂದೆ ಬಾಲಕನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.

ಬಾಲಕನ ತಪ್ಪೊಪ್ಪಿಗೆಯ ನಂತರ, ಪೊಲೀಸರು ವಿಷಯದ ಬಗ್ಗೆ ಚರ್ಚಿಸಲು ಆತನ ಪೋಷಕರು ಮತ್ತು ಸಮಾಜದ ಮುಖಂಡರನ್ನು ಕರೆಯಿಸಿದರು. ಈ ವಿಷಯವು ಸುರತ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ಕಾಲ ಉದ್ವಿಗ್ನತೆಯನ್ನು ಉಂಟುಮಾಡಿತ್ತು. ಮುಸ್ಲಿಂ ಮುಖಂಡರು 'ಘಟನೆಯನ್ನು' ಖಂಡಿಸಿದ್ದರು ಮತ್ತು ಸಮಗ್ರ ತನಿಖೆಗೆ ಒತ್ತಾಯಿಸಿದ್ದರು.

SCROLL FOR NEXT