ರಾಜ್ಯ

ಬೆಂಗಳೂರು: ಹಿಂಸಾಚಾರಕ್ಕೆ ತಿರುಗಿದ ಬಾರ್ ಜಗಳ, ಯುವಕನ ತುಂಡರಿಸಿದ ಮುಷ್ಟಿಯನ್ನು ಎತ್ತೊಯ್ದ ಬೀದಿ ನಾಯಿ

Ramyashree GN

ಬೆಂಗಳೂರು: ಮಹಾಲಕ್ಷ್ಮಿಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಪ್ರದೇಶದಲ್ಲಿ ಬೀದಿ ನಾಯಿಯೊಂದು ಯುವಕನ ಎಡಗೈನ ತುಂಡರಿಸಿದ ಮುಷ್ಟಿಯನ್ನು ಎತ್ತುಕೊಂಡು ಹೋಗಿರುವ ವಿಲಕ್ಷಣ ಘಟನೆ ನಡೆದಿದೆ.

21 ವರ್ಷದ ಎಸ್ ಪ್ರಜ್ವಲ್ ಮತ್ತು ಆತನ ಸ್ನೇಹಿತರು ಮತ್ತೊಂದು ಗುಂಪಿನವರೊಂದಿಗೆ ಬಾರ್‌ನಲ್ಲಿ ಜಗಳದಲ್ಲಿ ತೊಡಗಿದ್ದರು ಮತ್ತು ಅವರನ್ನು ಬಾರ್ ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ.

ಸಂತ್ರಸ್ತ ಮತ್ತು ಆತನ ಗ್ಯಾಂಗ್ ನಂತರ ಸಿಗರೇಟ್ ಸೇದಲು ಪಾರ್ಕ್ ಬಳಿ ಹೋಗಿದ್ದರು. ಪ್ರತಿಸ್ಪರ್ಧಿ ಗ್ಯಾಂಗ್ ಸ್ಥಳದಿಂದ ಹೊರಟು ಬಳಿಕ ಕಾರಿನಲ್ಲಿ ಹಿಂತಿರುಗಿದ್ದಾರೆ. ಅವರನ್ನು ನೋಡಿದ ಪ್ರಜ್ವಲ್ ಸ್ನೇಹಿತರು ಓಡಿಹೋಗಿದ್ದಾರೆ. ಆದರೆ, ಆರೋಪಿಗಳು ಪ್ರಜ್ವಲ್ ನನ್ನು ಹಿಡಿದು ಆತನ ಎಡಗೈ ಮುಷ್ಟಿ ಹಾಗೂ ಬಲಗೈನ ಬೆರಳುಗಳಿಗೆ ಮಚ್ಚಿನಿಂದ ಒಡೆದಿದ್ದಾರೆ. ಭಾನುವಾರ ನಸುಕಿನ 2 ಗಂಟೆ ಸುಮಾರಿಗೆ ಜೆ.ಸಿ.ನಗರದ ಶಿವ ದೇವಸ್ಥಾನದ ಪಾರ್ಕ್ ಬಳಿ ದಾಳಿ ನಡೆದಿದೆ.

ಬಳಿಕ ಪ್ರಜ್ವಲ್‌ನ ಸ್ನೇಹಿತರು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತ ಜೆಸಿಬಿಯ ಬಕೆಟ್ ಮೇಲೆ ಬಿದ್ದ ನಂತರ ತನ್ನ ಮುಷ್ಟಿಯನ್ನು ಕಳೆದುಕೊಂಡಿದ್ದಾಗಿ ವೈದ್ಯರಿಗೆ ತಿಳಿಸಿದ್ದಾನೆ. ಆತನ ತಾಯಿ ಸುಧಾ ಸೋಮವಾರ ಪೊಲೀಸರಿಗೆ ದೂರು ನೀಡಿದ ಬಳಿಕವೇ ಘಟನೆ ಬೆಳಕಿಗೆ ಬಂದಿದೆ.

ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ನಾಯಿಯೊಂದು ಪ್ರಜ್ವಲ್‌ನ ಮುಷ್ಟಿಯನ್ನು ತೆಗೆದುಕೊಂಡು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಆರೋಪಿಗಳು ಮದ್ಯಪಾನ ಮಾಡುವಾಗ ಎದುರಿನ ಟೇಬಲ್‌ನಲ್ಲಿ ಕುಳಿತಿದ್ದ ಸಂತ್ರಸ್ತ ಮತ್ತು ಆತನ ಸ್ನೇಹಿತರ ಮೇಲೆ ಟಿಶ್ಯೂ ಪೇಪರ್ ಎಸೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಸಂತ್ರಸ್ತ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ನಿಜವಾದ ಕಾರಣವನ್ನು ಮರೆಮಾಚಿದ್ದ ಮತ್ತು ನಿರ್ಮಾಣ ಸ್ಥಳದಲ್ಲಿ ಸಂಭವಿಸಿದ ಅಪಘಾತ ಎಂದು ಬಿಂಬಿಸಿದ್ದರು. ಸಂತ್ರಸ್ತ ಸದ್ಯ ಅಪಾಯದಿಂದ ಪಾರಾಗಿದ್ದು, ಹೇಳಿಕೆ ನೀಡಿದ್ದಾರೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳನ್ನು ಹರೀಶ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಸುಮಾರು ಮೂರು ವರ್ಷಗಳ ಹಿಂದೆ ಮೂಡಲಪಾಳ್ಯ ನಿವಾಸಿ ಪ್ರಜ್ವಲ್ ಎಂಬಾತ ಇದೇ ಗ್ಯಾಂಗ್‌ನೊಂದಿಗೆ ಜಗಳ ಮಾಡಿಕೊಂಡಿದ್ದು, ಪ್ರತೀಕಾರವಾಗಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮಹಾಲಕ್ಷ್ಮಿಪುರಂ ಪೊಲೀಸರು ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಜೊತೆಗೆ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

SCROLL FOR NEXT