ರಾಜ್ಯ

ಉತ್ತಮ ಫಲಿತಾಂಶ ಬಂದರೆ ಬಿಬಿಎಂಪಿ ಶಾಲೆ ಮುಖ್ಯೋಪಾಧ್ಯಾಯರಿಗೆ ಕಾಶ್ಮೀರ, ಸಿಂಗಾಪುರ್ ಟ್ರಿಪ್!

Shilpa D

ಬೆಂಗಳೂರು:  ಬಿಬಿಎಂಪಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.80-100 ಫಲಿತಾಂಶ ತರುವ ಮುಖ್ಯಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಕಾಶ್ಮೀರ ಮತ್ತು ಸಿಂಗಾಪುರಕ್ಕೆ ಪ್ರವಾಸಕ್ಕೆ ಕಳುಹಿಸುವ ಆಫರ್ ನೀಡಲಾಗಿದೆ.

ಬಿಬಿಎಂಪಿಯ ‘ಎಪಿಜೆ ಅಬ್ದುಲ್ ಕಲಾಂ ಡ್ರೀಮ್ ಸ್ಕೂಲ್ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ಇಲಾಖೆಯ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್, ವಿದ್ಯಾರ್ಥಿಗಳು ಶೇ.100 ಪಡೆದರೆ ಅವರನ್ನೂ ಸಿಂಗಾಪುರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವ್ಯವಸ್ಥೆಯನ್ನು 'CSR' ಉಪಕ್ರಮದ ಮೂಲಕ ನೋಡಿಕೊಳ್ಳಲಾಗುವುದು. ಮುಖ್ಯ ಆಯುಕ್ತರಿಂದ ಕಡತಗಳಿಗೆ ಸಹಿ ಪಡೆದ ನಂತರ ಪಾಲಿಕೆಯು ವಿಧಾನಗಳನ್ನು ರೂಪಿಸುತ್ತದೆ. ಈ ಇಲಾಖೆಯಲ್ಲಿ ನಾನು ಇಲ್ಲೇ ಇರುತ್ತೇನೆಯೋ ಇಲ್ಲವೋ, ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಲಾಗುವುದು, ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಆಗಸ್ಟ್ 15 ರಂದು ಪ್ರಾರಂಭವಾಗಿ ಅಕ್ಟೋಬರ್ 15 ರಂದು ಮುಕ್ತಾಯಗೊಂಡ 'ಎಪಿಜೆ ಅಬ್ದುಲ್ ಕಲಾಂ ಡ್ರೀಮ್ ಸ್ಕೂಲ್' ಎಂಬ ಪ್ರಾಯೋಗಿಕ ಯೋಜನೆ ಅಡಿಯಲ್ಲಿ ಶಾಲೆಗಳ ಗುಣಮಟ್ಟದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಬಿಬಿಎಂಪಿ ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪ್ರಾಥಮಿಕ ಶಾಲೆಯಿಂದ ಪದವಿ ಕಾಲೇಜುಗಳವರೆಗಿನ 17 ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಿ, ಅವರ ಸಂಸ್ಥೆಗಳ ಅಭಿವೃದ್ಧಿಗಾಗಿ ತಲಾ 1 ಲಕ್ಷ ರೂ.ಗಳ ಚೆಕ್ ಅನ್ನು ನೀಡಲಾಯಿತು.

ಬಿಬಿಎಂಪಿಯ ಶಿಕ್ಷಣ ವಿಭಾಗದಡಿ 93 ನರ್ಸರಿ ಶಾಲೆ, 16 ಪ್ರಾಥಮಿಕ ಶಾಲೆ, 18 ಪದವಿ ಪೂರ್ವ ಕಾಲೇಜು, 4 ಪದವಿ ಕಾಲೇಜು ಹಾಗೂ 2 ಸ್ನಾತಕೋತ್ತರ ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಶಾಲಾ ಮುಖ್ಯಸ್ಥರಿಗೆ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ‘ಕನಸಿನ ಶಾಲೆ’ ಪರಿಕಲ್ಪನೆಯಡಿ ಶಾಲಾ ಶಿಕ್ಷಣ ಗುಣಮಟ್ಟಸುಧಾರಣೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸುವಂತೆ ನೀಡಿದ ಸೂಚನೆ ಮೇರೆಗೆ ಮುಖ್ಯಸ್ಥರು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಕೆ ಮಾಡಿದ್ದರು. ಅದರಲ್ಲಿ ಅತ್ಯುತ್ತಮ ಕ್ರಿಯಾ ಯೋಜನೆ ರೂಪಿಸಿದ 17 ಶಾಲಾ ಕಾಲೇಜುಗಳಿಗೆ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ತಲಾ .1 ಲಕ್ಷ ಪ್ರೋತ್ಸಾಹ ಧನವನ್ನು ನೀಡಲಾಯಿತು. ಪ್ರೋತ್ಸಾಹ ಧನ ಪಡೆದ ಶಾಲಾ ಕಾಲೇಜುಗಳ ಪೈಕಿ ಐದು ಪ್ರಾಥಮಿಕ, ಐದು ಪ್ರೌಢಶಾಲೆ, ಐದು ಪದವಿ ಪೂರ್ವ ಕಾಲೇಜು ಹಾಗೂ 2 ಪದವಿ ಕಾಲೇಜುಗಳಿವೆ.

ಜತೆಗೆ ಉತ್ತಮ ಕ್ರಿಯಾ ಯೋಜನೆ ಸಿದ್ಧಪಡಿಸಿದ 17 ಶಾಲಾ ಮುಖ್ಯಸ್ಥರಿಗೆ ಕಾರ್ಯಕ್ರಮದಲ್ಲಿ ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು. ಇದೇ ವೇಳೆ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಕನಸಿನ ಶಾಲೆ ಕಾರ್ಯಕ್ರಮದ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಸಮಾರಂಭದಲ್ಲಿ ಸಹಾಯಕ ಆಯುಕ್ತ ಉಮೇಶ್‌, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ(ಶಿಕ್ಷಣ) ವಿ.ಜಿ ಲೋಕೇಶ್‌, ಹಿರಿಯ ಸಹಾಯ ನಿರ್ದೇಶಕ ಹನುಮಂತಯ್ಯ ಇದ್ದರು.

SCROLL FOR NEXT