ರಾಜ್ಯ

ಬೆಂಗಳೂರು: ಸ್ಫೋಟಕ ವಸ್ತು ಕಚ್ಚಿದ ಡಾಬರ್‌ಮ್ಯಾನ್ ನಾಯಿ ಸಾವು

Manjula VN

ಬೆಂಗಳೂರು: ಸ್ಫೋಟಕ ವಸ್ತುವೊಂದನ್ನು ಕಚ್ಚಿ ಡಾಬರ್‌ಮ್ಯಾನ್ ನಾಯಿ ಮೃತಪಟ್ಟಿರುವ ಘಟನೆ ಕೆಂಗೇರಿ ಸಮೀಪದ ಬಿಎಂ ಕಾವಲ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ನಡೆದಿದೆ.

11 ಎಕರೆ ಭೂಮಿ ಹೊಂದಿರುವ ಮಾಲೀಕರು ಜಮೀನು ಕಾಯಲು ನಾಲ್ಕು ನಾಯಿಗಳನ್ನು ಸಾಕಿದ್ದರು, ನಾಲ್ಕು ನಾಯಿಗಳ ಪೈಕಿ ಎರಡು ನಾಯಿ ಡಾಬರ್ ಮ್ಯಾನ್ ಗಳಾಗಿದ್ದವು. ನಾಯಿ ಸಾವಿನ ನಂತರ ಮಾಲೀಕ ಬಿ ಕೆ ಚೇತನ್ ಕುಮಾರ್ ಪೊಲೀಸ್ ದೂರು ದಾಖಲಿಸಿದ್ದಾರೆ.

ವನ್ಯಜೀವಿ ಬೇಟೆಗಾರರು ಅಥವಾ ಕಾಡುಹಂದಿಗಳನ್ನು ಕೊಲ್ಲಲು ಪ್ರಯತ್ನಿಸುತ್ತಿರುವ ಬೇಟೆಗಾರರು ಮಾಂಸದ ಚೆಂಡುಗಳೊಳಗೆ ಸ್ಫೋಟಕ ವಸ್ತು ತುಂಬಿ ಜಮೀನಿನಲ್ಲಿ ಎಸೆದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಭಾನುವಾರ ಬೆಳಿಗ್ಗೆ 9.30ರ ಸುಮಾರಿಗೆ ಘಟನೆ ನಡೆದಿತ್ತು. ಮೃತ ಡಾಬರ್ ಮ್ಯಾನ್ 1 ವರ್ಷದ ಗಂಡು ನಾಯಿಯಾಗಿದೆ. ಕೆಲ ತಿಂಗಳ ಹಿಂದೆ ಇದೇ ಜಾಗದಲ್ಲಿ ಹಸವೊಂದು ಸಾವನ್ನಪ್ಪಿತ್ತು. ಈ ಪ್ರದೇಶದಲ್ಲಿ ಹಲವು ಕಾಡು ಹಂದಿಗಳು ಹಾಗೂ ಜಿಂಕೆಗಳಿದ್ದು, ಅವುಗಳನ್ನು ಬೇಟೆಯಾದಲು ಸ್ಫೋಟಕ ವಸ್ತುಗಳನ್ನು ಎಸೆಯಲಾಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರ ಕೈವಾಡ ಕುರಿತು ಶಂಕೆಗಳಿವೆ. ಪ್ರಕರಣ ಸಂಬಂಧ ಇನ್ನೂ ಯಾರನ್ನೂ ಬಂಧನಕ್ಕೊಳಪಡಿಸಿಲ್ಲ. 1908ರ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಆರೋಪಿಗಳು ಮಾಂಸ ಮತ್ತು ಚರ್ಮಕ್ಕಾಗಿ ಕಾಡುಹಂದಿಯನ್ನು ಹಿಡಿಯುವ ಪ್ರಯತ್ನದಲ್ಲಿ ಗನ್‌ಪೌಡರ್‌ನಿಂದ ತಯಾರಿಸಿದ ಕಚ್ಚಾ ಬಾಂಬ್ ಅನ್ನು ಎಸೆದಿದ್ದಾರೆ ಎಂದು ತೋರುತ್ತದೆ. ಹೆಚ್ಚಿನ ಕಾಡುಹಂದಿ ಬೇಟೆಗಾರರು ತಮಿಳುನಾಡಿನಿಂದ ಬರುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT