ರಾಜ್ಯ

ಚಂದ್ರಶೇಖರ್ ಸಾವು ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ: ಪೊಲೀಸರ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ

Shilpa D

ಹೊನ್ನಾಳಿ: ತಮ್ಮ ಸಹೋದರನ ಪುತ್ರನ ಸಾವಿನ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ರೇಣುಕಾಚಾರ್ಯ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚಂದ್ರಶೇಖರ್‌ನದ್ದು ಸಹಜ ಸಾವಲ್ಲ, ಅಪಘಾತವಲ್ಲ. ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದುನ್ನು ಎಲ್ಲರೂ ಹೇಳುತ್ತಿದ್ದಾರೆ. ಪೊಲೀಸ್ ಇಲಾಖೆ ನಡೆಸುತ್ತಿರುವ ತನಿಖೆ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆ ಆಗಿದೆ. ನೂರಾರು ಪೊಲೀಸರು, ತಂಡಗಳಿದ್ದರೂ ಚಂದ್ರು ನಾಪತ್ತೆ ಆಗಿದ್ದರೂ ಯಾಕೆ ಪತ್ತೆ ಹಚ್ಚಲಿಲ್ಲ? ಪಕ್ಷದ ಮುಖಂಡರು, ಕಾರ್ಯಕರ್ತರು ಶಿವಮೊಗ್ಗದಿಂದ ಡ್ರೋನ್‌ ತರಿಸಿ ಕಾರು ಮತ್ತು ಚಂದ್ರುನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ. ಆದರೆ ತನಿಖೆ ಸಂಪೂರ್ಣ ವಿಫಲವಾಗಿದೆ ಎಂದು ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಕಾರು ಅತಿವೇಗವಾಗಿ ಚಲನೆ ಮಾಡಿತ್ತು, ಡ್ರೋನ್‌ ಬಳಸಿ ಕಾರು ಪತ್ತೆ ಹಚ್ಚಲಾಗಿತ್ತು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳುತ್ತಾರೆ. ಇಂತಹವರಿಂದ ನಮಗೆ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಾರಾ? ರಕ್ಷಕರಲ್ಲ ಇವರು ಭಕ್ಷಕರಾಗಿದ್ದಾರೆ. ಈಗ ನಡೆಸುತ್ತಿರುವ ತನಿಖೆಯಿಂದ ಸಮಾಧಾನ ಇಲ್ಲ ಎಂದು ಹೇಳಿದರು.

ಪೊಲೀಸರು ನನ್ನನ್ನು, ನನ್ನ ಕುಟುಂಬ, ನನ್ನ ಸಹೋದರ ಮತ್ತು ಅವರ ಕುಟುಂಬವನ್ನು ಸಂಪರ್ಕಿಸಲಿಲ್ಲ. ನನ್ನ ಸೋದರನ ಪುತ್ರನನ್ನು ಕೊಂದ ಅಪರಾಧಿಗಳನ್ನು ಅವರು ಹೇಗೆ ಹಿಡಿಯುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಓವರ್ ಸ್ಪೀಡ್ ಆಗಿದ್ದೇ ಆದರೆ ಕಾರು ಕಾಲುವೆಗೆ ಬೀಳುತ್ತಿರಲಿಲ್ಲ. ಸೀಟ್ ಬೆಲ್ಟ್ ಹಾಕಿದ್ದರೆ ಅವನು ಸೀಸ್‌ನಲ್ಲಿ ಇರಬೇಕಾಗಿತ್ತು. ಏರ್ ಬ್ಯಾಗ್ ಒಪನ್ ಆಗಿದೆ. ಕೈಯಲ್ಲಿ ಹಗ್ಗ ಇರುವುದು ಪತ್ತೆಯಾಗಿದೆ. ಇದೆಲ್ಲಾ ವಿಚಾರ ನೋಡಿದರೆ ಇದೊಂದು ಕೊಲೆ ಎಂಬುದು ಗೊತ್ತಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು. ಒಟ್ಟಿನಲ್ಲಿ ಪೊಲೀಸರ ಮೇಲೆ ನನಗೆ ಯಾವುದೇ ನಂಬಿಕೆ ಇಲ್ಲ ಎಂದು ಹೇಳುತ್ತಲೇ ಶಾಸಕ ರೇಣುಕಾಚಾರ್ಯ ಚಂದ್ರಶೇಖರ್‌ನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಐದು ದಿನಗಳ ಕಾಲ ದೇಹ ನೀರಿನಲ್ಲಿ ಇದ್ದುದರಿಂದ ಸಾವಿನ ಕಾರಣವನ್ನು ಸುಲಭವಾಗಿ ಗುರುತಿಸುವುದು ಕಷ್ಟ. ಮರಣೋತ್ತರ ಪರೀಕ್ಷೆಯ ವರದಿಯು ಸೋಮವಾರ ಸಿಗಲಿದ್ದು, ಆ ಬಳಿಕವೇ ಸಾವಿನ ಕಾರಣ ಗೊತ್ತಾಗಲಿದೆ. ನಾಲೆಯಲ್ಲಿ ಬಿದ್ದಿದ್ದ ಚಂದ್ರಶೇಖರ್‌ ಅವರ ಕಾರನ್ನು ಪೊಲೀಸರು ಪತ್ತೆ ಹಚ್ಚಿಲ್ಲ. ಊರ ಜನರು ಪತ್ತೆ ಮಾಡಿದ್ದಾರೆ. ಕಾರು ವೇಗವಾಗಿ ಬಂದು ಅಪಘಾತವಾಗಿದೆ ಎಂದು ಈಗ ಹೇಳುವ ಮೂಲಕ ಪೊಲೀಸರು ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ   ಎಂದು ಆರೋಪಿಸಿದ್ದಾರೆ.

SCROLL FOR NEXT