ರಾಜ್ಯ

ರೇಣುಕಾಚಾರ್ಯ ತಮ್ಮನ ಮಗ ಚಂದ್ರು ಸಾವಿನ ಪ್ರಕರಣ ಬಗ್ಗೆ ಸಮಗ್ರ ತನಿಖೆಗೆ ಸೂಚನೆ: ಸಿಎಂ ಬೊಮ್ಮಾಯಿ

Sumana Upadhyaya

ಹೊನ್ನಾಳಿ(ದಾವಣಗೆರೆ): ಹೊನ್ನಾಳಿ ಕ್ಷೇತ್ರದ ಶಾಸಕ ಎಂ ಪಿ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ಬಗ್ಗೆ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಹೊನ್ನಾಳಿಯಲ್ಲಿಯಲ್ಲಿರುವ ಶಾಸಕ ರೇಣುಕಾಚಾರ್ಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಯುವಕ ಚಂದ್ರಶೇಖರ್ ಮರಣೋತ್ತರ ಪರೀಕ್ಷೆ, ಎಫ್ಎಸ್ ಎಲ್ ವರದಿ ಇನ್ನೆರಡು ದಿನಗಳಲ್ಲಿ ಬರಲಿದೆ. ಅದರಲ್ಲಿ ಸಾವಿಗೆ ಕಾರಣಗಳು ಹೊರಬರಬಹುದು, ವರದಿ ಆಧಾರದ ಮೇಲೆ ತನಿಖೆಯನ್ನು ಚುರುಕುಗೊಳಿಸಲಾಗುವುದು ಎಂದು ಹೇಳಿದರು.

ಚಂದ್ರಶೇಖರ್ ಸಾವಿನ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಇದು ಕೊಲೆಯ ಆಯಾಮದಲ್ಲಿ ಮತ್ತು ಅಪಘಾತ ಆಯಾಮ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಘಟನೆ ಮರುಸೃಷ್ಟಿ ಮಾಡಿ ತನಿಖೆ ನಡೆಸುವಂತೆ ಎಸ್ ಪಿಗೆ ಸೂಚನೆ ನೀಡಿದ್ದೇನೆ, ಸಂಪೂರ್ಣ ತನಿಖೆಯಾಗಿ ನಿಖರತೆ ಬರುವವರೆಗೂ ಯಾವುದೇ ನಿರ್ಣಯಕ್ಕೆ ಬರುವುದು ಬೇಡ ಎಂದು ಹೇಳಿದ್ದೇನೆ. 

ಸಿಐಡಿಗೆ ಪ್ರಕರಣದ ತನಿಖೆ ವಹಿಸಲಾಗುತ್ತದೆಯೇ ಎಂಬ ಸಂಶಯಕ್ಕೆ ಉತ್ತರಿಸಿರುವ ಮುಖ್ಯಮಂತ್ರಿಗಳು ಪೊಲೀಸರಿಂದಲೇ ಸಮಗ್ರ ತನಿಖೆಯಾಗಲಿದೆ, ಮುಂದಿನ ದಿನಗಳಲ್ಲಿ ಯಾವ ರೀತಿ, ಯಾವ ಮಟ್ಟಕ್ಕೆ, ಯಾವ ಆಯಾಮಗಳಲ್ಲಿ ತನಿಖೆ ಮಾಡಬೇಕೆಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದ ಮೇಲೆ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದರು.

ಶಾಸಕ ರೇಣುಕಾಚಾರ್ಯರ ಕೆಲಸ ಕಾರ್ಯಗಳಿಗೆ ಚಂದ್ರು ಸಹಕರಿಸಿ ಹೊಂದಿಕೊಂಡು ಸಹಾಯ ಮಾಡಿಕೊಂಡು ಹೋಗುತ್ತಿದ್ದ. ಹೀಗಾಗಿ ಆತನ ಹಠಾತ್ ನಿಧನ ಅವರಿಗೆ ಮತ್ತು ಕುಟುಂಬಕ್ಕೆ ಆಘಾತ ತಂದಿದೆ. ರೇಣುಕಾಚಾರ್ಯ ನನಗೆ ಸೋದರ ಇದ್ದಂತೆ. ಅವರ ದುಃಖ ನನ್ನ ದುಃಖ ಎಂದು ಭಾವಿಸಿ ಇಂದು ಬಂದಿದ್ದೇನೆ ಎಂದರು.

ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಶಾಸಕ ರೇಣುಕಾಚಾರ್ಯ ಪ್ರತ್ಯೇಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. 

SCROLL FOR NEXT