ರಾಜ್ಯ

ಮಹದೇವಪುರ ವಲಯದಿಂದ ಕಂಪೇಗೌಡ ಏರ್ ಪೋರ್ಟ್ ಗೆ ಸಂಪರ್ಕಿಸುವ ಹೊಸ ಮಾರ್ಗ ಸದ್ಯದಲ್ಲಿಯೇ ಬಳಕೆಗೆ ಸಿದ್ಧ

Sumana Upadhyaya

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(KIA) ಮಹದೇವಪುರ ವಲಯದೊಂದಿಗೆ ಸಂಪರ್ಕಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಶೀಘ್ರದಲ್ಲೇ ಪರ್ಯಾಯ ಮಾರ್ಗ ಕಾಮಗಾರಿಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. 

ಈ ಸಂದರ್ಭದಲ್ಲಿ TNIE ಯೊಂದಿಗೆ ಮಾತನಾಡಿದ ಬಿಬಿಎಂಪಿಯ ಕಾರ್ಯನಿರ್ವಾಹಕ ಇಂಜಿನಿಯರ್ ಜಯಶಂಕರ್ ರೆಡ್ಡಿ, ಸಮಗ್ರ ಅಭಿವೃದ್ಧಿ ಯೋಜನೆಯಡಿ ಹೊಸ ರಸ್ತೆ ಯೋಜನೆಯು 2018 ರಲ್ಲಿ ಪ್ರಾರಂಭವಾಯಿತು, ಆದರೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳು ಮತ್ತು 2020 ರಲ್ಲಿ ಕೋವಿಡ್ ಕಾರಣದಿಂದ ಹಲವಾರು ಅಡೆತಡೆಗಳು ಎದುರಾದವು. 

ರಸ್ತೆ ವಿಸ್ತರಣೆಯು ಹೊರ ವರ್ತುಲ ರಸ್ತೆ, ಕಾಡುಬೀಸನಹಳ್ಳಿ ಮತ್ತು ಗುಂಜೂರಿನಲ್ಲಿ ಬಿಡಿಎಯ ಪೆರಿಫೆರಲ್ ರಿಂಗ್ ರಸ್ತೆ ನಡುವೆ ಇದೆ. 5.3 ಕಿಲೋ ಮೀಟರ್ ಬಿಬಿಎಂಪಿ ಯೋಜನೆಯು ಭೋಗನಹಳ್ಳಿ, ಪಾಣತ್ತೂರು ಮತ್ತು ವರ್ತೂರು ಎಂಬ ಮೂರು ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈಗಾಗಲೇ 3.5 ಕಿಲೋ ಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು, ಗುಂಜೂರಪಾಳ್ಯ ಸಮೀಪದ ಅರಣ್ಯ ಭೂಮಿ ಮತ್ತು ರೈಲ್ವೆ ಕ್ರಾಸಿಂಗ್‌ನಲ್ಲಿ ಅಡಚಣೆಯಿದೆ. ರೈಲ್ವೆ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದೇವೆ, ಆದರೆ ಸರ್ವೆ ನಂಬರ್‌ಗಳಲ್ಲಿನ ಸಣ್ಣ ನಿವೇಶನಗಳ ಮಾಲೀಕರು ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸಿದರೆ ವಿಮಾನ ನಿಲ್ದಾಣದ ಟರ್ಮಿನಲ್ -2 ಗೆ ಬೇಗನೆ ತಲುಪಬಹುದು ಎಂದರು. 

ಪಾಲಿಕೆ ಕೇವಲ 20 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ, ಇದರಿಂದ ಹಲವು ಪ್ರಯೋಜನಗಳಿವೆ. ಈ ಪ್ರದೇಶದಲ್ಲಿ ಉತ್ತಮ ಸಂಪರ್ಕವು ಹೆಚ್ಚಿನ ಸಾಫ್ಟ್‌ವೇರ್ ಪಾರ್ಕ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಯೋಜನೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಇದರ ಹೊರತಾಗಿ, ಎಲೆಕ್ಟ್ರಾನಿಕ್ಸ್ ಸಿಟಿ-ಎಚ್‌ಎಸ್‌ಆರ್, ಸರ್ಜಾಪುರ, ಕೋರಮಂಗಲ, ವರ್ತೂರು, ಗುಂಜೂರು ಮತ್ತು ಮಾರತಹಳ್ಳಿಯ ಜನರು ಟರ್ಮಿನಲ್-2 ತಲುಪಲು ಈ ಮಾರ್ಗವನ್ನು ಆರಿಸಿಕೊಳ್ಳುವುದರಿಂದ ಮೇಖ್ರಿ ವೃತ್ತ-ದೇವನಹಳ್ಳಿ ಮಾರ್ಗದ ಅವಲಂಬನೆ ಕಡಿಮೆಯಾಗುತ್ತದೆ.

ಸರ್ಜಾಪುರ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ಪ್ರಯಾಣಿಕರು ಈ ಮಾರ್ಗವನ್ನು ಪ್ರವೇಶಿಸಿ, ಕಾಡುಗೋಡಿಗೆ ತಲುಪಿ, ಬೆಳ್ಳತ್ತೂರು ಕಡೆಗೆ ಹೋಗಿ, ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಟಮ್ನಲ್ಲೂರು ತಲುಪಬಹುದು. ಇಲ್ಲಿಂದ ಬೂದಿಗೆರೆ ಕ್ರಾಸ್‌ಗೆ ಹೋಗಿ ನಂತರ ದೇವನಹಳ್ಳಿಗೆ ವಿಮಾನ ನಿಲ್ದಾಣವನ್ನು ತಲುಪಬಹುದು. ಈ ಸಂಪೂರ್ಣ ಭಾಗದಲ್ಲಿ ಇದುವರೆಗೆ ಯಾವುದೇ ನಗದು ಪರಿಹಾರ ನೀಡಿಲ್ಲ. ಹಲವೆಡೆ ಭೂಮಿಯನ್ನು ಟಿಡಿಆರ್ ಮೂಲಕ ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. 

SCROLL FOR NEXT