ಬೆಂಗಳೂರು: ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಒಕ್ಕಲಿಗ ಸಮಾಜಕ್ಕೆ ಬೃಹತ್ ವಧು-ವರರ ಸಮಾವೇಶ ಆಯೋಜಿಸಲಾಗಿತ್ತು. ವಧು-ವರರ ಅನ್ವೇಷಣೆಗಾಗಿ ಬಂದಿದ್ದ ಸಾವಿರಾರು ಜನರು ಸರತಿ ಸಾಲಲ್ಲಿ ನಿಂತು ನೋಂದಣಿ ಮಾಡಿಕೊಂಡರು.
250 ಹುಡುಗಿಯರು ವರಾನ್ವೇಷಣೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದರು, ಆದರೆ ಬರೋಬ್ಬರಿ 11,750 ಹುಡುಗರು ವಧು ಅನ್ವೇಷಣೆಗೆ ಹೆಸರು ನೋಂದಾಯಿಸಿದ್ದರು, ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದವರ ಪೈಕಿ ಸುಮಾರು 12 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮಠದ ಮಾಹಿತಿ ಕೇಂದ್ರ ಎದುರು ಸಾಲುಗಟ್ಟಿ ನಿಂತಿದ್ದ ಯುವಕರು ಬಾಳಸಂಗಾತಿ ಆಯ್ಕೆಗೆ ರಿಜಿಸ್ಟರ್ ಮಾಡಿಕೊಂಡರು. ನೋಂದಣಿ ಮಾಡಿದವರ ಪೈಕಿ 250 ಮಂದಿ ಹೆಣ್ಣು ಮಕ್ಕಳು, ಹಾಗೂ 11,750 ಮಂದಿ ಯುವಕರಿದ್ದಾರೆ. ಇದರಿಂದ ವಧುವಿಗಾಗಿ ನೋಂದಣಿ ಮಾಡಿಕೊಂಡ ಸಾವಿರಾರು ಯುವಕರಿಗೆ ಮತ್ತೆ ನಿರಾಶೆ ಉಂಟಾಗಿದೆ.
ನೋಂದಣಿ ಮಾಡಿಕೊಳ್ಳಲು ಪ್ರತಿಯೊಬ್ಬ ವರನೂ ತಲಾ 100 ರೂ.ಗಳನ್ನು ನೀಡಿದ್ದು, ಬಹುತೇಕ ಎಲ್ಲರೂ ತಮ್ಮ ಪೋಷಕರೊಂದಿಗೆ ಕೆಲವರು ಆಗಮಿಸಿ ಸ್ಥಳಕ್ಕೆ ಬಂದಿದ್ದರು. ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನಾಗಮಂಗಲ ತಾಲೂಕಿನ ಅಂಬಲಜೀರಹಳ್ಳಿ ಗ್ರಾಮದಿಂದ ಆದಿಚುಂಚನಗಿರಿ ಮಠದವರೆಗೆ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೆ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಸಮಾವೇಶಕ್ಕೆ ಇಷ್ಟೊಂದು ದೊಡ್ಡಮಟ್ಟದ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ನಿರೀಕ್ಷೆಯಿರಲಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಒಕ್ಕಲಿಗರ ವಧು-ವರರ ಸಮಾವೇಶವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುವುದು ಎಂದು ಹೇಳಿದ ಆಯೋಜಕರು ಸಮಾವೇಶವನ್ನು ರದ್ಧುಗೊಳಿಸಿದರು.