ರಾಜ್ಯ

'ವಿಶೇಷ ಕಮಿಷನರ್' ಆಗಿ ಅಧಿಕಾರ ಸ್ವೀಕರಿಸಿದ ಎಡಿಜಿಪಿ ಎಂ.ಎ. ಸಲೀಂ; ಸಂಚಾರ ದಟ್ಟಣೆ ನಿವಾರಿಸುವುದೇ ಆದ್ಯತೆ

Ramyashree GN

ಬೆಂಗಳೂರು: ಬೆಂಗಳೂರು ನಗರದ ‘ವಿಶೇಷ ಕಮಿಷನರ್’ (ಸಂಚಾರ) ಆಗಿ ಅಧಿಕಾರ ವಹಿಸಿಕೊಂಡ ಹಿರಿಯ ಐಪಿಎಸ್ ಅಧಿಕಾರಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರು, ನಗರದಲ್ಲಿನ ರಸ್ತೆಗಳ ದಟ್ಟಣೆ ನಿವಾರಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಆಡಳಿತ ವಿಭಾಗದ ಎಡಿಜಿಪಿಯಾಗಿದ್ದ ಸಲೀಂ ಅವರು ಸೋಮವಾರದಂದು ಮೇಲ್ದರ್ಜೆಗೇರಿದ ವಿಶೇಷ ಆಯುಕ್ತ (ಸಂಚಾರ) ಹುದ್ದೆಗೆ ವರ್ಗಾವಣೆಗೊಂಡಿದ್ದು, ಮಂಗಳವಾರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್. ರವಿಕಾಂತೇಗೌಡ ಅವರಿಂದ ಅಧಿಕಾರ ಸ್ವೀಕರಿಸಿದರು. ಬೆಂಗಳೂರು ಟ್ರಾಫಿಕ್ ಪೊಲೀಸ್‌ನ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದರು.

ಟಿಎನ್ಐಇ ಜೊತೆಗೆ ಮಾತನಾಡಿದ ಅವರು, 'ರಸ್ತೆಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುವುದು ನನ್ನ ಆದ್ಯತೆಯಾಗಿದೆ. ನಗರದಲ್ಲಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಅಧ್ಯಯನದ ಅಗತ್ಯವಿದೆ. ಅದರ ನಂತರವೇ ನಾನು ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಕಳೆದ ಕೆಲ ವರ್ಷಗಳಿಂದ ಟ್ರಾಫಿಕ್ ಪರಿಸ್ಥಿತಿಯು ಬಹಳಷ್ಟು ಬದಲಾಗಿದೆ ಮತ್ತು ವಾಹನಗಳ ಸಂಖ್ಯೆ ಹಲವಾರು ಪಟ್ಟು ಏರಿಕೆಯಾಗಿದೆ. ಹೀಗಿದ್ದರೂ, ಬೆಂಗಳೂರು ಟ್ರಾಫಿಕ್ ಪೊಲೀಸರು ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ' ಎಂದು ಹೇಳಿದರು.

ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಕಮ್ಯುಟರ್ ರೈಲು ಯೋಜನೆ ಮುಂತಾದವುಗಳನ್ನು ಸರ್ಕಾರ ಸುಧಾರಿಸುತ್ತಿರುವುದರಿಂದಾಗಿ ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಸಂಚಾರವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸಲಾಗುವುದು ಮತ್ತು ಸ್ವಯಂಚಾಲಿತ ಜಾರಿ ಮುಂದುವರಿಯುತ್ತದೆ ಎಂದು ಸಲೀಂ ಹೇಳಿದರು.

'ದಾಖಲೆಗಳನ್ನು ಪರಿಶೀಲಿಸಲು ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲ. ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು' ಎಂದು ಅವರು ಹೇಳಿದರು.

ವಾಹನಗಳ ಸುಗಮ ಸಂಚಾರ ಹಾಗೂ ಸಂಚಾರ ನಿಯಮಗಳ ಜಾರಿ ಹೊಣೆ ಹೊತ್ತಿರುವ ನಗರದ ಪೊಲೀಸ್ ವಿಭಾಗಕ್ಕೆ ಹೊಸದಾಗಿ ‘ವಿಶೇಷ ಕಮಿಷನರ್’ ಹುದ್ದೆ ಸೃಷ್ಟಿಯಾಗಿದ್ದು, ಈ ಹುದ್ದೆಗೆ ಎಡಿಜಿಪಿ ಎಂ.ಎ. ಸಲೀಂ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು.

ಸಂಚಾರ ವಿಭಾಗದ ಜಂಟಿ ಕಮಿಷನರ್ ಆಗಿದ್ದ ಬಿ.ಆರ್. ರವಿಕಾಂತೇಗೌಡ ಅವರನ್ನು ಸಿಐಡಿಯ ಡಿಐಜಿ ಆಗಿ ವರ್ಗಾಯಿಸಲಾಗಿದೆ. ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರನ್ನು ಡಿಐಜಿ ಹುದ್ದೆಗೆ ಬಡ್ತಿ ನೀಡುವ ಮೂಲಕ ಜಂಟಿ ಕಮಿಷನರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

SCROLL FOR NEXT