ರಾಜ್ಯ

'ವೋಗ್' ವಾಣಿಜ್ಯ ಚಿಹ್ನೆ ಸಮರ: ಟ್ರೇಡ್‌ಮಾರ್ಕ್‌ನ ಉಲ್ಲಂಘನೆಯಾಗಿಲ್ಲ ಎಂದ ಹೈಕೋರ್ಟ್

Manjula VN

ಬೆಂಗಳೂರು: ನಗರ ಮೂಲದ ವೋಗ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯು ತಮ್ಮ ಹೆಸರು ಮತ್ತು ವ್ಯಾಪಾರ ಶೈಲಿಯ ಭಾಗವಾಗಿ ಟ್ರೇಡ್‌ಮಾರ್ಕ್ ಆಗಿರುವ 'ವೋಗ್' ಅನ್ನು ಬಳಸದಂತೆ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಟ್ರೇಡ್‌ಮಾರ್ಕ್‌ನ ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ.

ಅಂತಾರಾಷ್ಟ್ರೀಯ ಮಹತ್ವದ ಫ್ಯಾಷನ್‌ ಪತ್ರಿಕೆ ʼವೋಗ್‌ʼ ಹಾಗೂ ಅದೇ ಹೆಸರಿನ್ನಿರಿಸಿಕೊಂಡಿರುವ ಬೆಂಗಳೂರಿನ ಫ್ಯಾಷನ್‌  ಶಿಕ್ಷಣ ಸಂಸ್ಥೆಯ ವ್ಯವಹಾರದ ನಡುವೆ ಹೋಲಿಕೆ ಇಲ್ಲ. ಹೀಗಾಗಿ ವಾಣಿಜ್ಯ ಚಿಹ್ನೆ ನಿಯಮಾವಳಿ ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಆ ಮೂಲಕ ಭಾರತ ಸೇರಿದಂತೆ ಜಗತ್ತಿನ ವಿವಿಧೆಡೆ ಪ್ರಸರಣ ಹೊಂದಿರುವ ಫ್ಯಾಷನ್‌ ನಿಯತಕಾಲಿಕ ʼವೋಗ್‌ʼ ಹೆಸರನ್ನು ನಗರದ ರಿಚ್ಮಂಡ್‌ ಸರ್ಕಲ್‌ನಲ್ಲಿರುವ ವೋಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬಳಸಿಕೊಳ್ಳುವಂತಿಲ್ಲ ಎಂದು ಕೆಳ ನ್ಯಾಯಾಲಯವೊಂದು ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರಿದ್ದ ಹೈಕೋರ್ಟ್‌ ಪೀಠ ಬದಿಗೆ ಸರಿಸಿದೆ. ಜೊತೆಗೆ ಫಿರ್ಯಾದುದಾರರ ದಾವೆಯನ್ನು ಅದು ವಜಾಗೊಳಿಸಿದೆ.

ಬೆಂಗಳೂರಿನ ಶಿಕ್ಷಣ ಸಂಸ್ಥೆಯ ಹೆಸರು ಮತ್ತು ನಿಯತಕಾಲಿಕದ ಹೆಸರು ಒಂದೇ ಎಂದು ಜನ ಗೊಂದಲಕ್ಕೊಳಗಾಗಬಹುದು ಎಂಬ ತಪ್ಪು ತೀರ್ಮಾನಕ್ಕೆ ಬೆಂಗಳೂರಿನ XVIII ಹೆಚ್ಚುವರಿ ಸಿಟಿ ಸಿವಿಲ್‌ ನ್ಯಾಯಾಲಯ ಬಂದಿದೆ ಎಂಬುದಾಗಿ ಪೀಠ ತಿಳಿಸಿದೆ.

“ಫಿರ್ಯಾದಿ (ಪ್ರಸ್ತುತ ಪ್ರಕರಣದಲ್ಲಿ ಪ್ರತಿವಾದಿ) ಪ್ರಕಟಿಸುವ ಪತ್ರಿಕೆಯು ಅನೇಕ ಜನ ಚಂದಾದಾರರಾಗದೇ ಇರುವ ಅಥವಾ ಅದನ್ನು ಓದದೇ ಇರುವ ಫ್ಯಾಷನ್‌ ನಿಯತಕಾಲಿಕೆಯಾಗಿದೆ. ಫ್ಯಾಷನ್‌ ಬಗ್ಗೆ ಸಾಮಾನ್ಯವಾಗಿ ಅರಿವು ಇರುವಂತಹ ಸಮಾಜದ ಸೀಮಿತ ವರ್ಗ ಮಾತ್ರ ಇದನ್ನು ಬಳಸುತ್ತಿದೆ. ಫಿರ್ಯಾದುದಾರರು ನಿಯತಕಾಲಿಕವನ್ನು ಪ್ರಕಟಿಸುವ ವ್ಯವಹಾರದಲ್ಲಿ ತೊಡಗಿದ್ದು, ಯಾವುದೇ ಸಂಸ್ಥೆಯನ್ನು ನಡೆಸುತ್ತಿಲ್ಲ ಎಂಬ ಅರಿವು ಅದನ್ನು ಖರೀದಿಸುವ ಚಂದಾದಾರರಾಗಿ ಇರಬಲ್ಲದು. ಅಂತೆಯೇ ಶಿಕ್ಷಣ ಸಂಸ್ಥೆ ಸೇರುವ ಬಹುಪಾಲು ವಿದ್ಯಾರ್ಥಿಗಳು ಸಂಸ್ಥೆ ನಿಯತಕಾಲಿಕಕ್ಕೆ ಸಂಬಂಧಿಸಿದ್ದು ಎಂದು ಗೊಂದಲಗೊಳ್ಳುವ ಸಂಭವವೇನೂ ಇಲ್ಲ. ಅಲ್ಲದೆ ಇದನ್ನು ಸಾಬೀತುಪಡಿಸುವಂತಹ ಪುರಾವೆ ಫಿರ್ಯಾದುದಾರರ ಬಳಿ ಇಲ್ಲ” ಎಂದು ನ್ಯಾಯಾಲಯ ವಿವರಿಸಿದೆ.

ಪ್ರತಿವಾದಿಗಳು/ಮೇಲ್ಮನವಿದಾರರು (ಶಿಕ್ಷಣ ಸಂಸ್ಥೆ) ʼವೋಗ್‌ʼ ಹೆಸರಿನ ನಿಯತಕಾಲಿಕವನ್ನು ಪ್ರಕಟಿಸುತ್ತಿಲ್ಲ ಬದಲಿಗೆ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಹೀಗಾಗಿ ಯಾವುದೇ ಟ್ರೇಡ್‌ಮಾರ್ಕ್‌ (ವ್ಯಾಪಾರ ಚಿಹ್ನೆ) ನಿಯಮಾವಳಿ ಉಲ್ಲಂಘನೆಯಾಗಿಲ್ಲ ಎಂಬ ಅಂಶವನ್ನು ಪೀಠ ಗಮನಿಸಿದೆ.

SCROLL FOR NEXT