ರಾಜ್ಯ

ಜೀವಬೆದರಿಕೆ: ಶಾರಿಕ್ ದಾಖಲಾಗಿರುವ ಮಂಗಳೂರು ಆಸ್ಪತ್ರೆಗೆ ಬಿಗಿ ಭದ್ರತೆ

Srinivasamurthy VN

ಮಂಗಳೂರು: ಮಂಗಳೂರು ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಮೊಹಮದ್ ಶಾರಿಕ್ ಗೆ ಜೀವ ಬೆದರಿಕೆ ಇರುವ ಕಾರಣ ಆತ ದಾಖಲಾಗಿರುವ ಮಂಗಳೂರು ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ನವೆಂಬರ್ 19 ರಂದು ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಮೊಹಮ್ಮದ್ ಶಾರಿಕ್ (24) ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಯ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸ್ಫೋಟದಲ್ಲಿ ಶಾರಿಕ್ ಮತ್ತು ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದು, ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ  ಸ್ಫೋಟದ ಹೊಣೆಗಾರಿಕೆಯನ್ನು ಕಡಿಮೆ-ಪ್ರಸಿದ್ಧ ಸಂಘಟನೆಯಾದ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ವಹಿಸಿಕೊಂಡಿದೆ. 

ಶಾರಿಕ್ ನನ್ನು ಪೊಲೀಸರ ತಂಡ ನಿಗಾ ವಹಿಸಿದ್ದು, ಚಿಕಿತ್ಸೆಗೆ ಆತ ಉತ್ತಮವಾಗಿ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಆತನ ವಾರ್ಡ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಪ್ರಕರಣದ ಪ್ರಮುಖ ಹ್ಯಾಂಡ್ಲರ್ ಆಗಿರುವ ಅರಾಫತ್ ಅಲಿ ಕೂಡ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇನ್ನು ಶಾರಿಕ್ ಗೆ ಜೀವ ಬೆದರಿಕೆ ಇದೆ ಎಂಬ ಊಹಾಪೋಹಗಳಿದ್ದು, ಈ ಕಾರಣಕ್ಕಾಗಿ ಆಸ್ಪತ್ರೆಯಲ್ಲಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಒಬ್ಬ ಇನ್ಸ್‌ಪೆಕ್ಟರ್, ಇಬ್ಬರು ಪಿಎಸ್‌ಐಗಳು ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಶಾರಿಕ್ ಕೊಠಡಿಯ ಬಳಿ ನಿಯೋಜಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಕೂಡ ಅಳವಡಿಸಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಶಾರಿಕ್ ಇನ್ನೂ ವೆಂಟಿಲೇಟರ್‌ನಲ್ಲಿದ್ದಾನೆ ಎಂದು ಹೇಳಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಆಟೋ ಚಾಲಕ ಪೂಜಾರಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. 

ಇನ್ನು ಶಾರಿಕ್‌ಗೆ ಸೋಂಕು ತಗುಲಬಹುದೆಂಬ ಕಾರಣಕ್ಕೆ ಆತನನ್ನು ಭೇಟಿಯಾಗಲು ಪೊಲೀಸರಿಗೆ ಇನ್ನೂ ಅವಕಾಶ ನೀಡಲಾಗಿಲ್ಲ ಎಂದು ಅವರು ಹೇಳಿದರು.
 

SCROLL FOR NEXT