ರಾಜ್ಯ

ಎಂಬೆಸಿ ಸಮೂಹದ ಅಧ್ಯಕ್ಷರಿಗೆ ಜಾರಿಯಾಗಿದ್ದ ಐಟಿ ನೋಟಿಸ್ ರದ್ದು

Manjula VN

ಬೆಂಗಳೂರು: ಕಪ್ಪು ಹಣ (ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ತೆರಿಗೆ ವಿಧಿಸುವ ಕಾಯ್ದೆಯಡಿಯಲ್ಲಿ ಎಂಬೆಸಿ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ವಿರ್ವಾನಿ ಅವರಿಗೆ ಆದಾಯ ತೆರಿಗೆ ಇಲಾಖೆ ಜಾರಿ ಮಾಡಿದ್ದ ಮೌಲ್ಯಮಾಪನ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ವಿರ್ವಾನ್‌ ಅವರ ರೊಮುಲಸ್‌ ಅಸೆಟ್ಸ್‌ ಲಿಮಿಟೆಡ್‌ನ (ಆರ್‌ಎಎಲ್‌) ಮಾಲೀಕತ್ವವನ್ನು ಸಾಬೀತುಪಡಿಸುವ ತಮ್ಮ ಹೊಣೆಗಾರಿಕೆಯನ್ನು ಮೌಲ್ಯಮಾಪನ ಅಧಿಕಾರಿಯು ನಿರ್ವಹಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಎಂ ಜಿ ಉಮಾ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ಆದಾಯ ತೆರಿಗೆ ಇಲಾಖೆ ಸೆಕ್ಷನ್‌ 132ರ ಅಡಿ ವಿರ್ವಾನಿ ಒಡೆತನದ ಮನೆಯಲ್ಲಿ ಶೋಧ ನಡೆಸಿದ ಬಳಿಕ ಮೌಲ್ಯಮಾಪನ ಅಧಿಕಾರಿಯು ಕೆಲವು ವಿಚಾರಗಳನ್ನು ಸೇರ್ಪಡೆಗೊಳಿಸಿ ಮತ್ತು ಆರ್‌ಎಎಲ್‌ನ ಫಲಾನುಭವಿ ಎಂದು ಹೇಳಿದ್ದಾರೆ.

ಹೆಚ್ಚುವರಿ ವಿಚಾರಗಳ ಸೇರ್ಪಡೆ ಮಾಡಿರುವುದನ್ನು ಪ್ರಶ್ನಿಸಿ ವಿರ್ವಾನಿ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಆಯುಕ್ತರು (ಮೇಲ್ಮನವಿಗಳು) ವಜಾ ಮಾಡಿದ್ದರು. ಬಳಿಕ ವಿರ್ವಾನಿ ಅವರು ಐಟಿಎಟಿಗೆ ಅರ್ಜಿ ಸಲ್ಲಿಸಿದ್ದು, ಅದು ಮೌಲ್ಯಮಾಪನ ಅಧಿಕಾರಿಯ ಆದೇಶವನ್ನು ಬದಿಗೆ ಸರಿಸಿತ್ತು. ವಿರ್ವಾನಿ ಮಾಲೀಕತ್ವದ ಆರ್‌ಎಎಲ್‌ ವ್ಯಾಪ್ತಿಯಲ್ಲಿ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರು ನೋಟಿಸ್‌ ಜಾರಿ ಮಾಡಿದ್ದರು.

ಇದನ್ನು ಪ್ರಶ್ನಿಸಿ ವಿರ್ವಾನಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದನ್ನು ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ವಿರ್ವಾನಿ ಅವರು ಮೇಲ್ಮನವಿ ಸಲ್ಲಿಸಿದ್ದರು. ವಿರ್ವಾನಿ ಅವರನ್ನು ಹಿರಿಯ ವಕೀಲ ಶಶಿಕಿರಣ ಶೆಟ್ಟಿ ಅವರು ಪ್ರತಿನಿಧಿಸಿದ್ದರು.

SCROLL FOR NEXT