ರಾಜ್ಯ

ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆ: ಅ.28ರಂದು ಮತದಾನ, ಅ.31ಕ್ಕೆ ಫಲಿತಾಂಶ

Srinivasamurthy VN

ಬೆಂಗಳೂರು: ರಾಜ್ಯದ 252 ಗ್ರಾಮ ಪಂಚಾಯ್ತಿಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ್ದು, ಇದೇ ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 31ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಾಜ್ಯ ಚುನಾವಣಾ ಆಯೋಗ, 'ಗ್ರಾಮ ಪಂಚಾಯ್ತಿ ಸಾರ್ವತ್ರಿಕ ಚುನಾವಣೆ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾಗಳಿಗೆ ಉಪಚುನಾವಣೆಯನ್ನು ಘೋಷಣೆ ಮಾಡಲಾಗಿದೆ. ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 30ಕ್ಕೆ ಫಲಿತಾಂಶ ಘೋಷಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಅಂತೆಯೇ ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, 2022ರ ಆಗಸ್ಟ್ ನಿಂದ 2022ರ ನವೆಂಬರ್ ವರೆಗೆ ಮುಕ್ತಾಯವಾಗಲಿರುವಂತೆ 203 ಗ್ರಾಮ ಪಂಚಾಯ್ತಿಗಳಿಗೆ ಹಾಗೂ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ 49 ಗ್ರಾಮ ಪಂಚಾಯ್ತಿಗಳಿಗೆ ಉಪ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ.

ಅಲ್ಲದೆ ಜಿಲ್ಲಾಧಿಕಾರಿಗಳಿಂದ ದಿನಾಂಕ 13-10-2022ರಂದು ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ದಿನಾಂಕ 18-10-2022ರಿಂದ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ ದಿನಾಂಕ 19-10-2022ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ 21-10-2022 ಆಗಿದೆ.

ದಿನಾಂಕ 28-10-2022ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯಕತೆ ಇದ್ದರೆ ದಿನಾಂಕ 30-10-2022ರಂದು ನಡೆಸಲಾಗುತ್ತದೆ. ಮತಏಣಿಕೆ ದಿನಾಂಕ 31-10-2022ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದು ತಿಳಿಸಿದೆ.

SCROLL FOR NEXT