ರಾಜ್ಯ

'ಇಡಿ ವಿಚಾರಣೆ ಎದುರಿಸುತ್ತೇನೆ, ಪಾದಯಾತ್ರೆ ಜನರದ್ದು, ನಾನೇ ಇರಬೇಕೆಂದೇನಿಲ್ಲ': ಡಿಕೆ ಶಿವಕುಮಾರ್

Srinivasamurthy VN

ಮಂಡ್ಯ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, 'ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್‌ ನೀಡಿದ್ದು ನಾನು ಶುಕ್ರವಾರ ದೆಹಲಿಯಲ್ಲಿ ವಿಚಾರಣೆ ಎದುರಿಸುತ್ತೇನೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಭಾರತ್‌ ಜೋಡೊ ಯಾತ್ರೆ ನಡೆಯುತ್ತಿರುವ ಕಾರಣ ಮಾನವೀಯತೆ ದೃಷ್ಟಿಯಿಂದ ವಿಚಾರಣೆಗೆ ಹಾಜರಾಗಲು ಸಮಯ ನೀಡಬೇಕು ಎಂದು ಇಡಿಗೆ ಮನವಿ ಮಾಡಿದ್ದೆ. ಆದರೆ ಗುರುವಾರ ಮತ್ತೊಂದು ನೋಟಿಸ್‌ ಬಂದಿದ್ದು ಅವಕಾಶ ನೀಡಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದೇನೆ. ನಮ್ಮ ಪಕ್ಷದ ಹಿರಿಯ ಮುಖಂಡರು ಕೂಡ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ’ ಎಂದರು.

‘ರಾಜ್ಯದಲ್ಲಿ ನಡೆಯುತ್ತಿರುವ ಪಾದಯಾತ್ರೆ ಜನರ ಯಾತ್ರೆಯಾಗಿದೆ, ಇದನ್ನು ಜನರೇ ನಡೆಸುತ್ತಾರೆ. ನಾನೇ ಸ್ಥಳದಲ್ಲಿ ಇರಬೇಕು ಎಂದೇನಿಲ್ಲ, ಸಕಲ ವ್ಯವಸ್ಥೆಯನ್ನು ನಮ್ಮ ಮುಖಂಡರು ನೋಡಿಕೊಳ್ಳುತ್ತಾರೆ. ಹೀಗಾಗಿ ವಿಚಾರಣೆಗೆ ತೆರಳಲು ನಾನು ಮತ್ತು ಡಿ.ಕೆ.ಸುರೇಶ್‌ ಗುರುವಾರ ರಾತ್ರಿಯೇ ದೆಹಲಿಗೆ ತೆರಳುತ್ತಿದ್ದೇವೆ’ ಎಂದರು.

ಕಾಂಗ್ರೆಸ್ ಪಕ್ಷದ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕಾರ್ಯಾಚರಣೆಗಳ ಬಗ್ಗೆ ನಡೆಯುತ್ತಿರುವ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಅವರ ಸಹೋದರ ಸಂಸದ, ಡಿ ಕೆ ಸುರೇಶ್ ಅವರಿಗೂ ಇಡಿ ಸಮನ್ಸ್ ನೀಡಿದೆ.
 

SCROLL FOR NEXT