ರಾಜ್ಯ

ಸರ್ಕಾರಿ ವಸತಿ ಶಾಲೆಗಳಲ್ಲಿ ತರಬೇತಿ ಶಿಬಿರ: 'RSS ಎಂದ ಮಾತ್ರಕ್ಕೇ ಅವಕಾಶ ಕೊಟ್ಟಿಲ್ಲ' ಎಂದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

Srinivasamurthy VN

ಕಾರವಾರ: ಸರ್ಕಾರಿ ಶಾಲೆಗಳಲ್ಲಿ ತರಬೇತಿ ಶಿಬಿರ ನಡೆಸುವ ಸಂಬಂಧ RSS ಎನ್ನುವ ಕಾರಣಕ್ಕೇ ನಾವು ಅವಕಾಶ ಕೊಟ್ಟಿಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಿ ವಸತಿ ಶಾಲೆಗಳಲ್ಲಿ ಆರ್‌ಎಸ್‌ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ವಸತಿ ಶಾಲೆಯಲ್ಲಿ ಅನುಮತಿ ನೀಡಿದ್ದಕ್ಕೆ SFI ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ' RSS ಸಂಘಟನೆಗೆಂದೇ ನಾವು ಅವಕಾಶ ಕೊಟ್ಟಿಲ್ಲ, ದೇಶ ಮೊದಲು ಎನ್ನುವ ಯಾವುದೇ ಸಂಸ್ಥೆಯಾದರೂ ಇಂತಹ ಶಿಬಿರಕ್ಕೆ ಅವಕಾಶ ಕೊಡುತ್ತೇವೆ, ಇದು ಮೊದಲಿನಿಂದಲೂ ವಾಡಿಕೆ ಎಂದು ಅವರು ಹೇಳಿದರು.

ಕಾರವಾರದಲ್ಲಿ ಮಾತನಾಡಿದ ಅವರು, 'ದಸರಾ ರಜೆ ಸಮಯದಲ್ಲಿ ರಾಜ್ಯದ ಎಲ್ಲ ಶಾಲೆಗಳಿಗೆ ರಜೆ ಕೊಡುತ್ತೇವೆ. ರಜೆ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ NSS ಸೇರಿದಂತೆ ಎಲ್ಲರೂ ಕೂಡ ಅನುಮತಿ ಕೇಳುತ್ತಾರೆ. ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಯಾವುದೇ ಉತ್ತಮ ಸಂದೇಶ ಕೊಡುವ, ಯಾವುದೇ ಸಂಸ್ಥೆಗಳಿದ್ದರೂ ಅನುಮತಿ ಕೊಡುತ್ತೇವೆ. ನಿಷೇಧಿತ ಯಾವುದೇ ಸಂಸ್ಥೆಗಳಿಗೆ ಅನುಮತಿ ನೀಡುವುದಿಲ್ಲ. ಆದರೆ ದೇಶ ಮೊದಲು ಅನ್ನೊ ಯಾವುದೇ ಸಂಸ್ಥೆಗೆ ಅವಕಾಶ ಕೊಡುತ್ತೇವೆ. ಇದು ಮೊದಲಿನಿಂದಲೂ ವಾಡಿಕೆ. ಈ ಹಿನ್ನೆಲೆಯಲ್ಲಿ ಅವಕಾಶ ಕೊಟ್ಟಿದ್ದೇವೆಯೇ ಹೊರತು RSS ಎಂಬ ಒಂದೇ ಕಾರಣಕ್ಕೆ ನಾವು ಅವಕಾಶ ಕೊಟ್ಟಿಲ್ಲ. ಟೀಕೆ ಮಾಡುವವರು ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದು ಟೀಕೆ ಮಾಡಲಿ ಎಂದು ತಿರುಗೇಟು ನೀಡಿದರು.
 

SCROLL FOR NEXT