ರಾಜ್ಯ

ಬಿಬಿಎಂಪಿ ಅಕ್ರಮ ಒತ್ತುವರಿ ತೆರವು ಕಾರ್ಯ: ಕೆ ಆರ್ ಪುರಂ, ಹೂಡಿ, ವೈಟ್ ಫೀಲ್ಡ್ ನಲ್ಲಿ ಘರ್ಜಿಸಿದ ಬುಲ್ಡೋಜರ್

Sumana Upadhyaya

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ, ಹೂಡಿ, ಟಿಝಡ್ ಅಪಾರ್ಟ್ ಮೆಂಟ್, ಮಹದೇವಪುರ ವಲಯ ಮತ್ತು ಕೆ ಆರ್ ಪುರಂನ ಗಾಯತ್ರಿ ಲೇ ಔಟ್ ನಲ್ಲಿ ರಾಜಕಾಲುವೆ, ಒಳಚರಂಡಿಯ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು.

ಟಿಝಡ್ ಅಪಾರ್ಟ್ ಮೆಂಟ್ ನ ಭದ್ರತಾ ಕೊಠಡಿ ಮತ್ತು 70 ಮೀಟರ್ ಉದ್ದದ ಕಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ. ಸಂಬಂಧಪಟ್ಟವರಿಗೆ ನೊಟೀಸ್ ನೀಡಲಾಗಿದೆ. ಕಳೆದ ಆಗಸ್ಟ್-ಸೆಪ್ಟೆಂಬರ್ ನಲ್ಲಿ ನಗರದಲ್ಲಿ ಸುರಿದ ಅವ್ಯಾಹತ ಮಳೆಯಿಂದ ಪ್ರವಾಹ ಉಂಟಾಗಿದ್ದು ಅಕ್ರಮ ಒತ್ತುವರಿಯೇ ಕಾರಣ ಎಂದು ಬಿಬಿಎಂಪಿ ತೆರವು ಕಾರ್ಯಕ್ಕೆ ಇಳಿದಿದೆ. ಪ್ರವಾಹಪೀಡಿತ ಅಪಾರ್ಟ್ ಮೆಂಟ್ ಗಳು ಮತ್ತು ಮನೆಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಬಿಬಿಎಂಪಿ ದೋಣಿಗಳನ್ನು ಮತ್ತು ಎಸ್ ಡಿಆರ್ ಎಫ್ ತಂಡವನ್ನು ನಿಯೋಜಿಸಬೇಕಾಗಿ ಬಂದಿತ್ತು.

ಹೂಡಿ ಉಪವಲಯದಲ್ಲಿ ಚರಂಡಿ ಮಾರ್ಗದಲ್ಲಿರುವ ದಿವ್ಯ ಶಾಲೆಯ ಕಂಪೌಂಡ್ ಗೋಡೆಯನ್ನು ಕೆಡವಲು ಮಣ್ಣು ತೆಗೆಯುವವರನ್ನು ನಿಯೋಜಿಸಬೇಕಾಗಿ ಬಂತು. ಶಾಲೆಯ 25 ಮೀಟರ್ ಉದ್ದದ ಕಂಪೌಂಡ್ ಗೋಡೆ ಮತ್ತು ಪಕ್ಕದಲ್ಲಿನ ಮೂರು ಶೆಡ್ ಗಳನ್ನು ಕೆಡವಲಾಗಿದೆ.

ವೈಟ್ ಫೀಲ್ಡ್ ರಿಂಗ್ ರಸ್ತೆಯ ಭಗಿನಿ ಹೊಟೇಲ್ ನ ಎದುರು ಇರುವ ರಾಜಣ್ಣ ಗೌಡ್ರು ಹೊಟೇಲ್ ನ 8/15 ಮೀಟರ್ ಉದ್ದದ ಗೋಡೆಯನ್ನು ತೆರವು ಮಾಡಲಾಗಿದೆ. ಭಗಿನಿ ಹೋಟೆಲ್ ಕೂಡ ಚರಂಡಿಯನ್ನು ಒತ್ತುವರಿ ಮಾಡಿದ್ದು, ಒತ್ತುವರಿ ಮಾಡಿಕೊಂಡ ಭಾಗದಲ್ಲಿ ಗ್ಲಾಸ್ ಅಳವಡಿಸಲಾಗಿದೆ. ಅದನ್ನು ತೆಗೆಯುತ್ತೇವೆ ಎಂದು ಹೊಟೇಲ್ ನವರು ಹೇಳಿದ್ದು, ಆದ್ಯತೆ ಮೇರೆಗೆ ಮಾಡಿ, ಇಲ್ಲದಿದ್ದರೆ ಕ್ರಮ ಎದುರಿಸಬೇಕೆಂದು ಪಾಲಿಕೆ ಎಚ್ಚರಿಕೆ ನೀಡಿದೆ. 

ಅದೇ ರೀತಿ ಕೆಆರ್ ಪುರಂನ ಬಸವನಪುರ ವಾರ್ಡ್‌ನ ಗಾಯತ್ರಿ ಲೇಔಟ್‌ನಲ್ಲಿ ಆರು ವಸತಿ ಕಟ್ಟಡಗಳ ಗೋಡೆಗಳು ಮತ್ತು 60 ಮೀಟರ್ ಉದ್ದದ ನೀರಿನ ಕಾಲುವೆಯಲ್ಲಿ ನಿರ್ಮಿಸಲಾದ ಕಾಂಪೌಂಡ್ ಗೋಡೆಯನ್ನು ಅತಿಕ್ರಮಣ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. 

SCROLL FOR NEXT