ರಾಜ್ಯ

ಸುರತ್ಕಲ್ ಟೋಲ್ ಗೇಟ್ ವಿವಾದ: ಹಲವು ಹೋರಾಟಗಾರರು ಪೊಲೀಸರ ವಶಕ್ಕೆ

Manjula VN

ಮಂಗಳೂರು: ಮಂಗಳೂರಿನ‌ ಸುರತ್ಕಲ್ ಟೋಲ್ ಗೇಟ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟೋಲ್ ವಿರೋಧಿ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಟೋಲ್‌ ಗೇಟ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ಹಿನ್ನೆಲೆಯಲ್ಲಿ, ಹಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹಲವು ಬಾರಿ ಹೋರಾಟ ನಡೆಸಿದ್ದ ಹೋರಾಟಗಾರರು ಇಂದು ಟೋಲ್ ಗೇಟ್‌ ಅನ್ನು ನೇರ ಕಾರ್ಯಾಚರಣೆ ಮಾಡಿ ಕಿತ್ತೆಸೆಯಲು ಮುಂದಾಗಿದ್ದಾರೆ. ಅನುಮತಿ ಪಡೆದು ಬೆಳಗ್ಗೆಯಿಂದ ಶಾಂತಿಯುತವಾಗಿ ಹೋರಾಟ ಆರಂಭಿಸಿದ ಪ್ರತಿಭಟನಾಕಾರರು ಬಳಿಕ ಟೋಲ್‌ ಸಿಬ್ಬಂದಿ ಕೂರುವ ಜಾಗಕ್ಕೆ ಮುತ್ತಿಗೆ ಹಾಕಿದ್ದಾರೆ.

ಈ ವೇಳೆ ಪ್ರತಿಭಟನಾಕಾರರನ್ನು ತಳ್ಳಿ ಮುಂದಕ್ಕೆ ಬಂದ ಪೊಲೀಸರು ಮಿಥುನ್ ರೈ, ಐವನ್‌ ಡಿಸೋಜ, ಮುನೀರ್‌ ಕಾಟಿಪಳ್ಳ ಸೇರಿದಂತೆ ಮತ್ತಿತರರನ್ನು ವಶಕ್ಕೆ ಪಡೆದುಕೊಂಡರು.

ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹ ನಿಲ್ಲಿಸುವಂತೆ ಪ್ರತಿಭಟನಾಕಾರರು ಅಧಿಕಾರಿಗಳಿಗೆ ಮಂಗಳವಾರದವರೆಗೂ ಗಡುವು ನೀಡಿದ್ದರು. ಪ್ರತಿಭಟನೆ ಶಾಂತಿಯುತವಾಗಿ ಆರಂಭವಾದರೂ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿತು. 

ಟೋಲ್‌ಗೇಟ್‌ಗೆ ನುಗ್ಗಿದ ಪ್ರತಿಭಟನಾಕಾರರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತು. 

ಟೋಲ್ ಸಂಗ್ರಹದಿಂದ ಜನರಿಗೆ ಸಮಸ್ಯೆಯಾಗುತ್ತಿದ್ದರೂ ದಕ್ಷಿಣ ಕನ್ನಡ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. 

60 ಕಿಲೋ ಮೀಟರ್‌ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ, ದಕ್ಷಿಣಕನ್ನಡ ಜಿಲ್ಲೆಯಲ್ಲಿ 48 ಕಿಲೋ ಮೀಟರ್‌ ಅಂತರದಲ್ಲಿ 4 ಟೋಲ್‌ಗೇಟ್‌ಗಳಿದ್ದು, ಅದರಲ್ಲೂ ಸುರತ್ಕಲ್ ಟೋಲ್‌ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿದೆ. ಹೀಗಾಗಿ ಹೋರಾಟಗಾರರೇ ನೇರ ಕಾರ್ಯಾಚರಣೆ ನಡೆಸಿ ಟೋಲ್ ಗೇಟ್‌ ಅನ್ನು ಕಿತ್ತೆಸೆಯಲು ಮುಂದಾಗಿದ್ದಾರೆ.

ಈ ಎರಡು ಟೋಲ್ ಪ್ಲಾಜಾಗಳು 10 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ಒಂದೇ ಹೆದ್ದಾರಿಯಲ್ಲಿ ಇರುವುದರಿಂದ ಎನ್‌ಎಚ್‌ಎಐ ಟೋಲ್ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಟೋಲ್‌ಗೇಟ್ ಮುಚ್ಚುವಂತೆ ಒತ್ತಾಯಿಸುತ್ತಿದೆ.

SCROLL FOR NEXT