ರಾಜ್ಯ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗನ ಆಯ್ಕೆ: ಖರ್ಗೆಗೆ ಸಿದ್ದರಾಮಯ್ಯ, ಡಿಕೆಶಿ ಅಭಿನಂದನೆ

Manjula VN

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯದ ಇತರೆ ರಾಜಕೀಯ ನಾಯಕರು ಖರ್ಗೆಯವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. 

ಸಾಮಾಜಿದ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷದ ನೂತನ‌ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಅವರಿಗೆ ಹಾರ್ದಿಕ ಅಭಿನಂದನೆಗಳು. ಪ್ರತಿಭೆ ಮತ್ತು ಅನುಭವವನ್ನು‌ ಮೈಗೂಡಿಸಿಕೊಂಡ ಖರ್ಗೆಯವರಿಗೆ ಕಾಂಗ್ರೆಸ್ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಶಕ್ತಿ ಇದೆ. ಖರ್ಗೆಯವರ ಆಯ್ಕೆ ಕನ್ನಡಿಗರಿಗೂ ಹೆಮ್ಮೆಯ‌ ಸಂಗತಿ ಎಂದು ಹೇಳಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರು ಟ್ವೀಟ್ ಮಾಡಿ, ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ಪಕ್ಷ ಇನ್ನಷ್ಟು ಎತ್ತರಕ್ಕೇರಲಿದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿ, ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆಗಳು. ಮಲ್ಲಿಕಾರ್ಜುನ್ ಖರ್ಗೆ ಅವರ ಸುದೀರ್ಘ ರಾಜಕೀಯ ಅನುಭವ, ಅಧ್ಯಯನ, ಜ್ಞಾನ, ಬದ್ಧತೆಗಳು ಕಾಂಗ್ರೆಸ್ ಪಕ್ಷವನ್ನು ಸೈದ್ದಂತಿಕವಾಗಿ ಹಾಗೂ ರಾಜಕೀಯವಾಗಿ ಇನ್ನಷ್ಟು ಗಟ್ಟಿಯಾಗಿ ಕಟ್ಟುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದೆ. 

ಹೆಚ್.ಡಿ.ಕುಮಾರಸ್ವಾಮಿಯವರು ಟ್ವೀಟ್ ಮಾಡಿ, ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾದ ರಾಜ್ಯದ  ಹಿರಿಯ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಹಿರಿಯರಾದ ಖರ್ಗೆ ಅವರಿಗೆ ಅಭಿನಂದನೆಗಳು. ಶ್ರೀ ಖರ್ಗೆ ಅವರದ್ದು ಸುದೀರ್ಘ ರಾಜಕೀಯ ಅನುಭವ. ಅಚಲವಾದ ಪಕ್ಷನಿಷ್ಠೆ ಅವರನ್ನು ಈ ಉನ್ನತ ಹುದ್ದೆವರೆಗೂ ತಂದಿದೆ. ಶ್ರೀ ಖರ್ಗೆ ಅವರಿಂದ ಆ ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆಂದು ಹೇಳಿದ್ದಾರೆ. 

SCROLL FOR NEXT