ರಾಜ್ಯ

ರಾಜ್ಯದಲ್ಲೇ ಮೊದಲು: ಯಶವಂತಪುರ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕಂಟ್ರೋಲ್ ರೂಂ!

Srinivasamurthy VN

ಬೆಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕಂಟ್ರೋಲ್ ರೂಂ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕಂಟ್ರೋಲ್ ರೂಂ ಅನ್ನು ಇಂದು ಉದ್ಘಾಟಿಸಿದರು, ಇದು ಪೊಲೀಸ್ ಠಾಣೆಯಿಂದ ಕಾನೂನು ಸುವ್ಯವಸ್ಥೆ ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಣ ಕೊಠಡಿಯಿಂದ ಸೂಚನೆಗಳನ್ನು ರವಾನಿಸಲು ಅನುವು ಮಾಡಿಕೊಡುತ್ತದೆ. 

ಕರ್ನಾಟಕದಲ್ಲಿ ಆರಂಭವಾದ ಮೊದಲ ಸಿಸಿಟಿವಿ ಕಂಟ್ರೋಲ್ ರೂಂ ಇದಾಗಿದೆ. ರಾಜರಾಜೇಶ್ವರಿ ನಗರ ಶಾಸಕ ಮತ್ತು ಸಚಿವ ಮುನಿರತ್ನ ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಿದ್ದಾರೆ. 

ಠಾಣೆಯ ವ್ಯಾಪ್ತಿಯಲ್ಲಿ 25 ಸ್ಥಳಗಳಲ್ಲಿ 64 ಹೈಡೆಫಿನಿಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಡಿಸಿಪಿ (ಉತ್ತರ) ವಿನಾಯಕ ಪಾಟೀಲ್ ಹೇಳಿದರು. “ಸೂಕ್ಷ್ಮ ಮತ್ತು ಅಪರಾಧ ಪೀಡಿತ ಪ್ರಮುಖ ಜಂಕ್ಷನ್‌ಗಳು ಮತ್ತು ಆಂತರಿಕ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿ ಸ್ಥಳದಲ್ಲಿ ಸ್ಪೀಕರ್ ಇರುವುದರಿಂದ ಪೊಲೀಸ್ ಸಿಬ್ಬಂದಿ ಪೊಲೀಸ್ ಠಾಣೆಯಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ನಾಗರಿಕರಿಗೆ ಅಗತ್ಯ ಸೂಚನೆಗಳನ್ನು ನೀಡಬಹುದು”ಎಂದು ಅವರು ಹೇಳಿದರು.

ಈ ವ್ಯವಸ್ಥೆಯು ಐದು ವರ್ಷಗಳ ನಿರ್ವಹಣಾ ಒಪ್ಪಂದವನ್ನು ಹೊಂದಿದ್ದು ಅದನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನದ ಬಳಕೆಯು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಸಮಾಜ ವಿರೋಧಿ ಅಂಶಗಳ ವಿರುದ್ಧ ಹೋರಾಡುವಲ್ಲಿ  ನೆರವು ನೀಡುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, 'ಬೆಂಗಳೂರಿನ ಯಶವಂತಪುರ ಪೊಲೀಸ್ ಉಪಾಧೀಕ್ಷ ಕಚೇರಿಯಲ್ಲಿ ಆರಂಭವಾದ ಸಿಸಿಟಿವಿ ಕಂಟ್ರೋಲಿಂಗ್ ಘಟಕವನ್ನು ಉದ್ಘಾಟಿಸಲಾಯಿತು. ದೂರ ಸಂವೇದಿ ವ್ಯವಸ್ಥೆಯಿಂದ ಸುಗಮ ಟ್ರಾಫಿಕ್ ನಿಯಂತ್ರಣದ ವ್ಯವಸ್ಥೆ ವೀಕ್ಷಿಸಲಾಯಿತು. ಹಾಗೆಯೇ, ಟ್ರಾಫಿಕ್‌ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಆಟೋ ಚಾಲಕನಿಗೆ ಕಿವಿಮಾತು ಹೇಳಲಾಯಿತು. ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಸಿಸಿಟಿವಿ ಅಳವಡಿಸಿ ನಾಗರಿಕರ ಜತೆಗೆ ಸಂವಾದ ನಡೆಸಬಹುದಾದ ವ್ಯವಸ್ಥೆ ಇದಾಗಿದೆ. ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇದನ್ನು ಸ್ಥಾಪಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT