ರಾಜ್ಯ

2ಎ ಮೀಸಲಾತಿಗೆ ಆಗ್ರಹ: ಡಿ.12ಕ್ಕೆ ವಿಧಾನಸೌಧದ ಮುಂದೆ ಪ್ರತಿಭಟನೆಗೆ ಪಂಚಮಸಾಲಿಗಳು ನಿರ್ಧಾರ

Manjula VN

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಡಿ.12ರಂದು ವಿಧಾನಸೌಧದ ಎದುರು 25 ಲಕ್ಷ ಜನರಿಂದ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಹುಕ್ಕೇರಿಯಲ್ಲಿ ಶುಕ್ರವಾರ ನಡೆದ ಪಂಚಮಸಾಲಿಗಳ ಬೃಹತ್‌ ಸಮಾವೇಶದಲ್ಲಿ ತೀರ್ಮಾನಿಸಲಾಯಿತು. 

ಸಭೆಯನ್ನುದ್ದೇಶಿಸಿ ಮಾತನಾಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿ, ಪಂಚಮಸಾಲಿಗಳಿಗೆ ಮೀಸಲಾತಿಗಾಗಿ ನಡೆಯುತ್ತಿರುವ ಚಳವಳಿ ಶೀಘ್ರದಲ್ಲೇ ತಾರ್ಕಿಕ ಅಂತ್ಯವನ್ನು ತಲುಪಲಿದೆ ಎಂದು ಘೋಷಿಸಿದರು.

ಪಂಚಮಸಾಲಿ ಸಮುದಾಯವು ಲಿಂಗಾಯತ ಜನಸಂಖ್ಯೆಯ ಶೇಕಡಾ 82 ರಷ್ಟು ಬಹುಮತವನ್ನು ಹೊಂದಿದೆ. ಆದರೂ ಅಧಿಕಾರ ಪಡೆಯುವ ಅವಕಾಶಗಳಿಂದ ವಂಚಿತವಾಗಿದೆ. ಅದಕ್ಕೆ ಕಾರಣ ಸಮುದಾಯದ ಜನರು ಸಹೃದಯರಾಗಿರುವುದು ಎಂದು ಹೇಳಿದರು.

ತಾವು ಕೂಡಲಸಂಗಮದ ಪೀಠಾಧ್ಯಕ್ಷರಾದಾಗಿನಿಂದ ಇಲ್ಲಿಯವರೆಗೆ ಯಾವುದಕ್ಕೂ ಬೇಡಿಕೆ ಇಟ್ಟಿಲ್ಲ, ಆದರೆ ಈಗ ಪಂಚಮಸಾಲಿಗಳಿಗೆ ಹೋರಾಟಕ್ಕೆ ಕರೆ ನೀಡುವುದಾಗಿ ತಿಳಿಸಿದರು.

ಸರ್ಕಾರವು ಎಸ್‌ಸಿ/ಎಸ್‌ಟಿಗಳಿಗೆ ಸಮಾನವಾಗಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕು. ಬಿಜೆಪಿಯು ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಆಡಳಿತ ನಡೆಸುತ್ತಿದೆ, ಹೀಗಾಗಿ ಪಕ್ಷಕ್ಕೆ ಮೀಸಲಾತಿಯನ್ನು ಘೋಷಿಸಲು ಸುಲಭವಾಗುತ್ತದೆ ಎಂದರು. 

ಧಾರವಾಡ ಶಾಸಕ ಅರವಿಂದ ಬೆಲ್ಲದ್ ಅವರು ಸಮುದಾಯಕ್ಕೆ ಮೀಸಲಾತಿ ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ಸಹಾಯ ಮಾಡಬೇಕೆಂದು ಆಗ್ರಹಿಸಿದರು. ಸಮಾವೇಶದಲ್ಲಿ ಹಲವು ಮುಖಂಡರು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಮಾತನಾಡಿದರು.

SCROLL FOR NEXT