ರಾಜ್ಯ

ಆ್ಯಂಬುಲೆನ್ಸ್'ಗಳ ಮೇಲೆ ಹದಗೆಟ್ಟ ರಸ್ತೆಗಳ ಗಂಭೀರ ಪರಿಣಾಮ: ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ಸಂಕಷ್ಟದಲ್ಲಿ ರೋಗಿಗಳು!

Manjula VN

ಬೆಂಗಳೂರು: ನಗರದಲ್ಲಿನ ಕಳಪೆ ರಸ್ತೆ ಮೂಲಸೌಕರ್ಯ, ನಿರಂತರ ಮಳೆ ಮತ್ತು ರಸ್ತೆ ಗುಂಡಿಗಳು ಆಂಬ್ಯುಲೆನ್ಸ್ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದರ ಪರಿಣಾಮ ನಿರ್ಣಾಯಕ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಲಾಗದೆ ರೋಗಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ. 

ರಸ್ತೆ ಗುಂಡಿಗಳು, ನಗರದ ಸುತ್ತಲೂ ನಿರಂತರವಾಗಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳು, ಹದಗೆಟ್ಟ ರಸ್ತೆಗಳಿಂದಾಗಿ ಆ್ಯಂಬುಲೆನ್ಸ್ ಗಳು ಆಸ್ಪತ್ರೆಗೆ ಬರುವುದು ತಡವಾಗುತ್ತಿದ್ದು, ಸೂಕ್ತ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ಬರಲು ಸಾಧ್ಯವಾಗದ ಕಾರಣ ಸಾವುಗಳು ಸಂಭವಿಸುತ್ತಿವೆ ಎಂದು ಕೆಸಿ ಜನರಲ್ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ. 

ಇತ್ತೀಚೆಗೆ ಆಸ್ಪತ್ರೆಯಲ್ಲಿ ಪ್ರತಿನಿತ್ಯ 10-15 ತುರ್ತು ಪ್ರಕರಣಗಳು ದಾಖಲಾಗುತ್ತಿದ್ದು, ಕನಿಷ್ಠ ಐದು ಪ್ರಕರಣಗಳಲ್ಲಿ ವಾಹನ ದಟ್ಟಣೆಯಿಂದಾಗಿ ಚಾಲಕರು ತಡವಾಗಿ ಬಂದಿರುವುದು ವರದಿಯಾಗಿದೆ. ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಚಾಲಕರಿಗೆ ರೋಗಿಯನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆತರುವುದು ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ. 

ಅಂಗಾಂಗಗಳನ್ನು ಸಾಗಿಸುವ ವೇಳೆ ಝೀರೋ ಟ್ರಾಫಿಕ್ ಮಾಡುವಂತೆ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಆದರೆ, ತುರ್ತು ಸಂದರ್ಭಗಳಲ್ಲಿ ನೀಡಲಾಗುವುದಿಲ್ಲ. ಮಳೆ ಬರುವ ಸಂದರ್ಭದಲ್ಲಿ ರಸ್ತೆಗಳು ಜಲಾವೃತ್ತಗೊಳ್ಳುವುದರಿಂದ ಪರಿಸ್ಥಿತಿಗಳು ಮತ್ತಷ್ಟು ಹದಗೆಡುತ್ತಿದೆ. ಮಳೆ ವೇಳೆ ದ್ವಿಚಕ್ರ ವಾಹನಗಳು ರಸ್ತೆಗಳಲ್ಲಿ ನಿಲ್ಲುವುದರಿಂದ ಆ್ಯಂಬುಲೆನ್ಸ್ ಗಳಿಗೆ ಓಡಾಡಲು ಸ್ಥಳಾವಕಾಶದ ಕೊರತೆ ಎದುರಾಗಿ ಸಂಕಷ್ಟಕ್ಕೆ ಸಿಲುಕುತ್ತವೆ. ತುರ್ತು ಸೇವೆಗಳಿಗೆ ಆದ್ಯತೆ ನೀಡಲು ಸರ್ಕಾರ ಯಾವುದೇ ವ್ಯವಸ್ಥೆ ಆರಂಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ಮಾತನಾಡಿ, ಸೂಕ್ತ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ಬಾರದೆ ಇದ್ದಾಗ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಮಳೆಯಿಂದಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿ ಹೋಗಿದೆ. ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ 3-4 ಆ್ಯಂಬುಲೆನ್ಸ್ ಗಳು ಸಂಕಷ್ಟಕ್ಕೆ ಸಿಲುಕಿರುವುದನ್ನು ನಾನು ನೋಡಿದ್ದೇನೆಂದು ಹೇಳಿದರು. 

ಮೂಲ್ಯ ಸಂಸ್ಥಾಪಕ ಮತ್ತು ಸಿಇಒ ಪ್ರದೀಪ್ ಸೌಂದರರಾಜನ್ ಅವರು ಮಾತನಾಡಿ, ಕೆಲವು ವರ್ಷಗಳ ಹಿಂದೆ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ. ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿತ್ತು. ತಂದೆಯನ್ನು ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯತ್ತ ಸಾಗುತ್ತಿದ್ದು. ಈ ವೇಳೆ ಸಂಚಾರ ದಟ್ಟಣೆ ಎದುರಾಗಿತ್ತು. ತಂದೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತಲುಪದ ಕಾರಣ ತಂದೆ ಕೊನೆಯುಸಿರೆಳೆದಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

SCROLL FOR NEXT