ರಾಜ್ಯ

ದೀಪಾವಳಿ ಹಬ್ಬದಂದು ಸೂರ್ಯಗ್ರಹಣ; ಬೆಂಗಳೂರಿನಲ್ಲಿ ಶೇ.10ರಷ್ಟು ಮಾತ್ರ ಗೋಚರ

Ramyashree GN

ಬೆಂಗಳೂರು: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗದಿದ್ದಲ್ಲಿ ಅಕ್ಟೋಬರ್ 25ರಂದು ನಗರದಲ್ಲಿ ಶೇ 10ರಷ್ಟು ಮಾತ್ರ ಸೂರ್ಯಗ್ರಹಣ ಗೋಚರಿಸಲಿದೆ.

ಹೀಗಿರುವಾಗ, ಹವಾಮಾನ ತಜ್ಞರು ಮತ್ತು ಭಾರತೀಯ ಹವಾಮಾನ ಇಲಾಖೆಯ (IMD) ಅಧಿಕಾರಿಗಳು, ಅಕ್ಟೋಬರ್ 24 ರಿಂದ 25 ರವರೆಗೆ ಮೋಡ ಕವಿದ ವಾತಾವರಣ ಮಾತ್ರ ಇರುವ ಸಾಧ್ಯತೆ ಇದೆ ಎಂದಿದ್ದಾರೆ.

ಅಲ್ಲದೆ, ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯವು ತನ್ನ ಆವರಣದಿಂದ ಗ್ರಹಣ ಗೋಚರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

'ಗ್ರಹಣದ ಗೋಚರತೆಯ ಮೇಲೆ ಪರಿಣಾಮ ಬೀರುವ ಅನೇಕ ಎತ್ತರದ ರಚನೆಗಳು ಈ ಪ್ರದೇಶದ ಸುತ್ತಲೂ ಇರುವ ಕಾರಣ, ಸೂರ್ಯಗ್ರಹಣ ನೋಡಲು ನಗರದಲ್ಲಿನ ಎತ್ತರದ ಕಟ್ಟಡಗಳನ್ನು ಏರುವ ಮೂಲಕ ಗ್ರಹಣ ಗ್ಲಾಸ್‌ಗಳ ಮೂಲಕ ಪಶ್ಚಿಮಕ್ಕೆ ನೋಡಲು ಜನರಿಗೆ ತಿಳಿಸುತ್ತಿದ್ದೇವೆ ಮತ್ತು ವಿನಂತಿಸುತ್ತಿದ್ದೇವೆ' ಎಂದು ತಾರಾಲಯದ ಅಧಿಕಾರಿಯೊಬ್ಬರು ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಗ್ರಹಣದ ಗರಿಷ್ಠ ಗೋಚರತೆಯು ರಷ್ಯಾ ಮತ್ತು ಕಜಕಿಸ್ತಾನ್‌ನಲ್ಲಿ ಶೇ 80 ರಷ್ಟು ಇರುತ್ತದೆ. ಆದ್ದರಿಂದ, ಗ್ರಹಣವನ್ನು ವೀಕ್ಷಿಸಲು ಜನರಿಗೆ ನೆರವಾಗುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ವಿಶೇಷ ಸ್ಕ್ರೀನಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ಸ್ಕೋಪ್ (ಔಟ್ರೀಚ್) ವಿಭಾಗದ ಮುಖ್ಯಸ್ಥ ನಿರುಜ್ ಮೋಹನ್ ರಾಮಾನುಜಮ್ ಹೇಳಿದ್ದಾರೆ.

ಕೆಲವು ಖಗೋಳ ಭೌತಶಾಸ್ತ್ರಜ್ಞರ ಪ್ರಕಾರ, ಶೇ 55 ರಷ್ಟು ಗ್ರಹಣವು ಲಡಾಖ್‌ನಲ್ಲಿ ಸಂಜೆ 4.30 ರಿಂದ ಗೋಚರಿಸುತ್ತದೆ. ಬೆಂಗಳೂರಿಗರು 2019 ರಲ್ಲಿ ಕೊನೆಯ ಬಾರಿಗೆ ಬೆಳಗಿನ ಸಮಯದಲ್ಲಿ ಗ್ರಹಣವನ್ನು ವೀಕ್ಷಿಸಿದ್ದರು. ಈ ಬಾರಿ ಸೂರ್ಯಾಸ್ತದ ಸಮಯದಲ್ಲಿ ಗ್ರಹಣ ಸಂಭವಿಸಲಿದೆ. ಈ ಬಾರಿ ಬೆಂಗಳೂರಿನಲ್ಲಿ ಸಂಜೆ 5.12 ರಿಂದ 5.55 ರವರೆಗೆ ಗೋಚರಿಸುತ್ತದೆ ಎಂದು ತಾರಾಲಯದ ಹಿರಿಯ ವೈಜ್ಞಾನಿಕ ಅಧಿಕಾರಿ ಎಂ ವೈ ಆನಂದ್ ತಿಳಿಸಿದ್ದಾರೆ.

ಸಂಜೆ 4.16 ರಿಂದ 6.09 ರವರೆಗೆ ಲೇಹ್‌ನಲ್ಲಿ ಶೇ 55, ದೆಹಲಿಯಲ್ಲಿ ಶೇ 44, ಮುಂಬೈನಲ್ಲಿ ಶೇ 25, ಹೈದರಾಬಾದ್‌ನಲ್ಲಿ ಶೇ 19 ಮತ್ತು ಕೋಲ್ಕತ್ತಾದಲ್ಲಿ ಶೇ 4 ರಷ್ಟು ಗ್ರಹಣ ಗೋಚರಿಸುತ್ತದೆ. ಗ್ರಹಣ ವೀಕ್ಷಿಸಲು ಗ್ರಹಣ ಕನ್ನಡಕ ಅಥವಾ ವೆಲ್ಡಿಂಗ್ ಗ್ಲಾಸ್ (ಸಂ. 14) ಬಳಸಲು ತಜ್ಞರು ಶಿಫಾರಸು ಮಾಡಿದ್ದಾರೆ.

SCROLL FOR NEXT