ರಾಜ್ಯ

'ರೂಬಿಕ್ಸ್' ಮೂಲಕ ಅಪ್ಪು ಚಿತ್ರ ಬಿಡಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸಿದ ಶಾಲಾ ಬಾಲಕ

Manjula VN

'ಕರುನಾಡ ಕಣ್ಮಣಿ' ಪುನೀತ್ ರಾಜ್‌ಕುಮಾರ್ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿ 1 ವರ್ಷ ಕಳೆದಿದ್ದು, ಈಗಲೂ ಅವರ ಸಾವನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಇಂದಿಗೂ ಅಪ್ಪು ಸಮಾಧಿಗೆ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ.

ಅಪ್ಪುಗೆ ಪುಟ್ಟಮಕ್ಕಳೆಂದರ ಬಹಳ ಪ್ರೀತಿ. ಅಪ್ಪುಗೆ ಎಲ್ಲಾ ವರ್ಗದ ಅಭಿಮಾನಿಗಳಿದ್ದಾರೆ. ಪುನೀತ್ ಅವರ ಕನಸಿನ ಸಿನಿಮಾ ಗಂಧದ ಗುಡಿ ಬಿಡುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ರೂಬಿಕ್ ಕ್ಯೂಬ್ಸ್‌ ಕಲೆಯಲ್ಲಿ ಪರಿಣಿತಿ ಪಡೆದಿರುವ 4ನೇ ತರಗತಿ ಬಾಲಕ ಶ್ರೇಷ್ಟ್ ಪ್ರಭು (9), ರೂಬಿಕ್ ಕ್ಯೂಬ್ಸ್‌ನಲ್ಲಿ ಅಪ್ಪು ಅವರ ಫೋಟೋವನ್ನು ಬಿಡಿಸಿದ್ದಾನೆ. ಈ ಮೂಲಕ ನೆಚ್ಚಿನ ನಟನಿಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ್ದಾನೆ.

ಫೋಟೋ ಬಿಡಿಸಲು ಶ್ರೇಷ್ಠ ಪ್ರಭು 2 ಗಂಟೆಗೂ ಅಧಿಕ ಸಮಯ ತೆಗೆದುಕೊಂಡಿದ್ದಾನೆ. ಬಾಲಕನ ಈ ಪ್ರತಿಭೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರೂಬಿಕ್ ಕ್ಯೂಬ್ಸ್ ಮೂಲಕ ನರೇಂದ್ರ ಮೋದಿ, ವಿರಾಟ್ ಕೊಹ್ಲಿ, ರತನ್ ಟಾಟಾ ಮತ್ತು ಡಾ.ರಾಜ್ ಕುಮಾರ್ ಅವರಂತಹ ಇತರ ಖ್ಯಾತ ವ್ಯಕ್ತಿಗಳ ಭಾವಚಿತ್ರಗಳನ್ನು ರಚಿಸಿ ಗಮನ ಸೆಳೆದ್ದಿದ್ದನು. ಇದೀಗ ಪುನೀತ್ ರಾಜ್​ಕುಮಾರ್ ಅವರ ಚಿತ್ರವನ್ನು ರುಬಿಕ್ ಕ್ಯೂಬ್ಸ್ ಮೂಲಕ ಬಿಡಿಸಿ ಅಚ್ಚರಿ ಮೂಡಿಸಿದ್ದಾನೆ.

6ನೇ ವಯಸ್ಸಿನಲ್ಲಿ ಇರುವಾಗ ರೂಬಿಕ್ಸ್ ಕ್ಯೂಬ್ ಕಲೆಯು ಶ್ರೇಷ್ಟ್ ಪ್ರಭುವನ್ನು ಆಕರ್ಷಿಸಿತು. ಸಾಂಕ್ರಾಮಿಕ ರೋಗ ಕೊರೋನಾ ಲಾಕ್ಡೌನ್​ಗಳು ಕಾಲಾನಂತರದಲ್ಲಿ ರುಬಿಕ್​ ಕ್ಯೂಬ್​ ಮೂಲಕ ಚಿತ್ರ ಬಿಡಿಸಲು ಮತ್ತು ಅದರಲ್ಲಿ ತಮ್ಮ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಸಹಾಯ ಮಾಡಿದವು.

ಆರಂಭದಲ್ಲಿ ನಾನು ಅವುಗಳನ್ನು ಪರಿಹರಿಸುವ ಆಸಕ್ತಿಯನ್ನು ಬೆಳೆಸಿಕೊಂಡಿದ್ದೆ. ಒಮ್ಮೆ ರೂಬಿಕ್ಸ್ ನನ್ನ ಕೈಯಲ್ಲಿಟ್ಟುಕೊಂಡಿದ್ದಾಗ ಶ್ರೇಷ್ಟ್ ಪ್ರಭು ಕಸಿದುಕೊಂಡು, ಅದರಲ್ಲಿ ಆತನಿಗಿದ್ದ ಉತ್ಸಾಹವನ್ನು ತೋರಿಸಿದ್ದ. ಬಳಿಕ ಅವನಲ್ಲಿ ಪ್ರತಿಭೆ ಇರುವುದನ್ನು ನಾನು ಅರಿತುಕೊಂಡಿದ್ದೆ. ಶ್ರೇಷ್ಟ್ 4 ವರ್ಷಗಳಿಂದ ರೂಬಿಕ್ ಕ್ಯೂಬ್ ಗಳನ್ನು ಪರಿಹರಿಸುತ್ತಿದ್ದಾನೆ. ಆರಂಭದಲ್ಲಿ 3x3 ಕ್ಯೂಬ್ ಗಳೊಂದಿಗೆ ಆರಂಭಿಸಿದ್ದ ಶ್ರೇಷ್ಟ್, ನಂತರ 4x4 ಕ್ಯೂಬ್ಸ್ ಗಳನ್ನು ಬಳಸಲು ಆರಂಭಿಸಿದ. ಬಳಿಕ ಅವುಗಳನ್ನು 15 ಸೆಕೆಂಡುಗಳಲ್ಲಿ ಪರಿಹರಿಸುವುದನ್ನು ಕಲಿತುಕೊಂಡಿದ್ದ ಎಂದು ಶ್ರೇಷ್ಟ್ ತಂದೆ ಗುರು ಪ್ರಸಾದ್ ಅವರು ಹೇಳಿದ್ದಾರೆ.

ಇಲ್ಲಿಯವರೆಗೆ, ವಿರಾಟ್ ಕೊಹ್ಲಿ, ರತನ್ ಟಾಟಾ ಮತ್ತು ಡಾ. ರಾಜ್‌ಕುಮಾರ್, ರಿಷಬ್ ಶೆಟ್ಟಿ ಮುಂತಾದ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳನ್ನು ಶ್ರೇಷ್ಠ್ ರಚಿಸಿದ್ದಾನೆ.

ತಂದೆಯ ಬೆಂಬಲ ಮತ್ತು ನಗರದ ರೂಬಿಕ್‌ನ ಕ್ಯೂಬ್ ಉತ್ಸಾಹಿಗಳಿಂದ ಬೋಧನೆಯೊಂದಿಗೆ, ಶ್ರೆಷ್ಟ್ ತ್ವರಿತವಾಗಿ ಭಾವಚಿತ್ರಗಳನ್ನು ರಚಿಸುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾನೆ.

ಇದೀಗ ಶ್ರೇಷ್ಟ್ ರುಬಿಕ್ ಕ್ಯೂಬ್​ಗಳನ್ನು ಬಳಸಿಕೊಂಡು ಸೆಲೆಬ್ರಿಟಿಗಳ ಲೈವ್ ಭಾವಚಿತ್ರಗಳನ್ನು ಮಾಡಲು ಯೋಜಿಸಿದ್ದು, ಮುಂದೊಂದು ದಿನ ಸ್ಪೀಡ್ ಕ್ಯೂಬಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಚಿಂತನೆ ನಡೆಸುತ್ತಿದ್ದಾನೆ.

SCROLL FOR NEXT