ರಾಜ್ಯ

ಬೆಂಗಳೂರಿನ ಬೈಜೂಸ್ ಪ್ರಧಾನ ಕಚೇರಿಯಲ್ಲಿ ನೌಕರರಿಗೆ ಬಲವಂತದ ರಾಜೀನಾಮೆಗೆ ಒತ್ತಾಯ

Vishwanath S

ಬೆಂಗಳೂರು: ಬೆಂಗಳೂರು ಮೂಲದ ಎಡ್ಟೆಕ್ ದೈತ್ಯ ಬೈಜೂಸ್ ಕೇರಳದ ತಿರುವನಂತಪುರಂನಲ್ಲಿ ಉದ್ಯೋಗಿಗಳನ್ನು ಭಾರೀ ಮಟ್ಟಿದಲ್ಲಿ ವಜಾಗೊಳಿಸಿ ಸುದ್ದಿ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲೂ ಅಂತಹ ಆರೋಪಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ, ಉದ್ಯೋಗಿಗಳನ್ನು ತಕ್ಷಣವೇ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ. ಇದೇ ಅಲ್ಲದೆ ತನ್ನ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ(ಕೆಐಟಿಯು) ಆರೋಪಿಸಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಕೆಐಟಿಯು ಕಾರ್ಯದರ್ಶಿ ಸೂರಜ್ ನಿಡಿಯಂಗ, ಬೈಜೂಸ್‌ನಲ್ಲಿರುವ ನೌಕರರು ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಮಾನವ ಸಂಪನ್ಮೂಲ ಇಲಾಖೆಯು ನೌಕರರಿಂದ ಬಲವಂತವಾಗಿ ರಾಜೀನಾಮೆ ಪಡೆಯುವಲ್ಲಿ ತೊಡಗಿದೆ ಎಂದು ಹೇಳಿದರು.

ಇನ್ನು ಸಂಸ್ಧೆಯಿಂದ ವಜಾಗೊಳಿಸುವ ಬಗ್ಗೆ ಯಾವುದೇ ಲಿಖಿತ ಸಾಕ್ಷ್ಯವಿಲ್ಲ. ಕಳೆದ ಒಂದು ವಾರದಿಂದ ಮಾನವ ಸಂಪನ್ಮೂಲ ಇಲಾಖೆ ನೌಕರರನ್ನು ಕರೆಸಿ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಸಲ್ಲಿಸುವಂತೆ ಹೇಳುತ್ತಿದೆ ಎಂದರು.

ಉದ್ಯೋಗಿಗಳನ್ನು ಭಾರೀ ಮಟ್ಟದಲ್ಲಿ ತೆಗೆದುಹಾಕುತ್ತಿರುವ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡ ನಂತರ ಉದ್ಯೋಗಿಗಳು ಕೇರಳದ ಕಾರ್ಮಿಕ ಸಚಿವ ಶಿವನ್‌ಕುಟ್ಟಿ ಅವರನ್ನು ಭೇಟಿ ಮಾಡಿದ್ದರು. ಇದಾದ ನಂತರ ಬೈಜು ತನ್ನ ತಿರುವನಂತಪುರಂ ಕಚೇರಿಯಲ್ಲಿನ ಆಡಳಿತ ತಂಡದವರಿಗೆ ವರ್ಗಾವಣೆ ಆಯ್ಕೆಗಳನ್ನು ನೀಡಿತು.

SCROLL FOR NEXT