ರಾಜ್ಯ

ಪುನೀತ್ ಗೆ ಕರ್ನಾಟಕ ರತ್ನ ಪ್ರದಾನ ಸಮಾರಂಭದಲ್ಲಿ ರಜನಿಕಾಂತ್‌, ಜೂ.ಎನ್‌ ಟಿಆರ್‌ ಭಾಗಿ: ಆರ್.ಅಶೋಕ್

Lingaraj Badiger

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನದಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಸಮಾರಂಭದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್‌ ಹಾಗೂ ತೆಲುಗು ಸೂಪರ್ ಸ್ಟಾರ್ ಜೂನಿಯರ್‌ ಎನ್‌ ಟಿಆರ್‌ ಅವರು ಭಾಗವಹಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್‌ ಅವರು ಶನಿವಾರ ತಿಳಿಸಿದ್ದಾರೆ.

ಸಚಿವ ಅಶೋಕ್‌ ನೇತೃತ್ವದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಮಿತಿ ರಚಿಸಲಾಗಿದ್ದು,  ಕಾರ್ಯಕ್ರಮದ ರೂಪುರೇಷೆಗಳ ಕುರಿತು ಇಂದು ಸಭೆ ನಡೆಸಲಾಯಿತು.

ಸಭೆಯ ನಂತರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್ ಅವರು, ರಾಜ್ಯೋತ್ಸವ ದಿನಂದು ಸಂಜೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅದ್ಧೂರಿ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಸಮಾರಂಭದಲ್ಲಿ ಪಾಲ್ಗೊಳ್ಳಲು ಹಿರಿಯ ನಟ ರಜನಿಕಾಂತ್‌, ಜೂ.ಎನ್‌ ಟಿಆರ್‌ ಅವರಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕದ ಖ್ಯಾತ ಕಲಾವಿದರೊಬ್ಬರಿಗೆ ಆಹ್ವಾನ ನೀಡಲಾಗಿದೆ. ಸಮಾರಂಭದಲ್ಲಿ 5 ಸಾವಿರ ಜನರಿಗೆ ಪಾಸ್‌ ನೀಡಲಾಗುವುದು ಎಂದು ಅವರು ವಿವರಿಸಿದರು.

ಕರ್ನಾಟಕ ರತ್ನ ಪ್ರಶಸ್ತಿಯ ಪದಕ ಪೂರ್ಣ ಬೆಳ್ಳಿಯಲ್ಲಿ ಇರುತ್ತದೆ. 50 ಗ್ರಾಂ ಚಿನ್ನದ ಪದಕ ಕೂಡ ಇರಲಿದೆ. ಈ ಮುಂಚೆ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡುವ ಯೋಜನೆ ಇತ್ತು. ಆದರೆ ಅವರ ಸಹೋದರ, ಕುಟುಂಬದ ಆಶಯದ ಮೇರೆಗೆ ವಿಧಾನಸೌಧದ ಮುಂಭಾಗದಲ್ಲಿ ಮಾಡಲಾಗುತ್ತಿದೆ ಎಂದು ಅಶೋಕ್‌ ತಿಳಿಸಿದರು.

ಈವರೆಗೆ ಎಂಟು ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ. 2009ರ ನಂತರ ಈಗ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

SCROLL FOR NEXT