ರಾಜ್ಯ

ಸಾಲಗಾರರ ಕಾಟಕ್ಕೆ ಬೇಸತ್ತ ಜಿಮ್ ಮಾಲೀಕ: ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು, ಐವರ ಬಂಧನ!

Shilpa D

ಬೆಂಗಳೂರು: ಸಾಲಗಾರರ ಕಾಟದಿಂದ ಬೇಸತ್ತ ಜಿಮ್ ಮಾಲೀಕರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಅಬ್ಬಿಗೆರೆಯಲ್ಲಿ ನಡೆದಿದೆ.

31 ವರ್ಷದ ಮನೋಹರ್ ಆತ್ಮಹತ್ಯೆಗೆ ಶರಣಾದ ಜಿಮ್ ಮಾಲೀಕ. ಕಮ್ಮಗೊಂಡನಹಳ್ಳಿ ಮುಖ್ಯ ರಸ್ತೆಯಲ್ಲಿ ಜಿಮ್ ನಡೆಸುತ್ತಿದ್ದ ಮನೋಹರ್ ಕೋವಿಡ್ ಸಂದರ್ಭದಿಂದಲೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು.

ಹರೀಶ್, ಮಂಜುನಾಥ್, ರಾಜು ಎಂಬುವವರ ಬಳಿ ಸಾಲ ಮಾಡಿದ್ದರು. ಸಾಲ ತೀರಿಸುವಂತೆ ಸಾಲಗಾರರು ಒತ್ತಡ ಹೇರುತ್ತಿದ್ದರು. ಜಿಮ್, ಮನೆ ಬಳಿ ಹೋಗಿ ಪದೇ ಪದೇ ಗಲಾಟೆ ಮಾಡಿದ್ದರು. ಇದರಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ಬಳಿಕ ಸೆಲ್ಫಿ ವಿಡಿಯೋ ಮಾಡಿ ಮನೋಹರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹರೀಶ್, ಮಂಜುನಾಥ್ ಪ್ರಸಾದ್, ರಾಜು, ಅಭಿ ಮತ್ತು ನಾಗೇಶ್ವರ್ ರಾವ್ ವಿರುದ್ಧ, ಮನೋಹರ್ ಸಹೋದರ, ಆರ್ ಅಜಯ್ ದೂರು ದಾಖಲಿಸಿದ್ದು,  ತನ್ನ ಸಹೋದರನಿಗೆ ತೀವ್ರ ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.

ಸೋಮವಾರ, ರಾತ್ರಿ 8 ಗಂಟೆ ಸುಮಾರಿಗೆ ಅಜಯ್ ವಾಟ್ಸಾಪ್ ಸಂಖ್ಯೆಗೆ  ಮನೋಹರ್ ಫೋನ್‌ನಿಂದ ಎರಡು ವೀಡಿಯೋಗಳು ಬಂದಿವೆ. ಹೊರಗೆ ಹೋಗಿದ್ದ ಅಜಯ್ ಕೂಡಲೇ ತನ್ನ ತಾಯಿಗೆ ಕರೆ ಮಾಡಿ ಮನೋಹರ್ ನನ್ನು ಪರೀಕ್ಷಿಸುವಂತೆ ಹೇಳಿದ. ಮನೆಗೆ ಧಾವಿಸಿ ನೋಡಿದಾಗ ತಾರಸಿಯ ಕೋಣೆಯ ಬಾಗಿಲುಗಳು ಒಳಗಿನಿಂದ ಲಾಕ್ ಆಗಿರುವುದು ಕಂಡುಬಂತು. ಕೂಡಲೇ ಬಾಗಿಲು ಹೊಡೆದು ನೋಡಿದಾಗ ಮನೋಹರ್ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಗಂಗಮ್ಮನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

SCROLL FOR NEXT