ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯ ಆರೋಪಿ ಚಿತ್ರದುರ್ಗ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರನ್ನು ಕಳೆದ ರಾತ್ರಿ ಬಂಧಿಸಿರುವ ಚಿತ್ರದುರ್ಗ ಪೊಲೀಸರು ಇದೀಗ ಎರಡನೇ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಎರಡನೇ ಆರೋಪಿ ರಶ್ಮಿಯವರ ಬಂಧನವಾಗಿದೆ ಎಂದು ಚಿತ್ರದುರ್ಗ ಎಸ್ಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುರುಘಾ ಮಠದಲ್ಲಿ ಲೇಡಿ ವಾರ್ಡನ್ ಆಗಿರುವ ರಶ್ಮಿಯನ್ನು ನಿನ್ನೆ ಪಾತ್ರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇಂದು ಬಂಧಿಸಿದ್ದಾರೆ.
ಸ್ವಾಮೀಜಿ ಅವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ರಶ್ಮಿ ಹೇಳುತ್ತಿದ್ದರು ಎಂದು ಸಂತ್ರಸ್ತ ಬಾಲಕಿಯರು ವಿಚಾರಣೆಯಲ್ಲಿ ಆರೋಪ ಮಾಡಿದ್ದಾರೆ. ಹಾಸ್ಟೆಲ್ನ ಮಹಿಳಾ ವಾರ್ಡನ್, ಎಸ್.ಕೆ.ಬಸವರಾಜನ್ ವಿರುದ್ಧ ಅತ್ಯಾಚಾರಕ್ಕೆ ಯತ್ನ, ಹಿಂಸೆ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಆ. 26 ರಂದು ಎಸ್.ಕೆ.ಬಸವರಾಜನ್ ವಿರುದ್ಧ ಸೆಕ್ಷನ್ 354ರಡಿ ಪ್ರಕರಣ ದಾಖಲಾಗಿದೆ. ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್ ವಿರುದ್ಧ IPC ಸೆಕ್ಷನ್ 341, 342, 504, 506ರಡಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾಸ್ಪತ್ರೆ ಸರ್ಜನ್ ಹೇಳಿಕೆ: ಇಂದು ಬೆಳಗ್ಗೆ ಮುರುಘಾ ಶ್ರೀಗಳಿಗೆ ಮಾಡಿರುವ ವೈದ್ಯಕೀಯ ತಪಾಸಣೆ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆ ಸರ್ಜನ್ ಡಾ ಬಸವರಾಜ್, ಮುರುಘಾ ಸ್ವಾಮೀಜಿಗೆ ಇಸಿಜಿ ಮಾಡಿದ್ದಾರೆ. ಇದೀಗ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಮತ್ತು ರಕ್ತದಲ್ಲಿ ಏರಿಳಿತಗಳನ್ನು ತೋರಿಸುತ್ತಿದೆ. 10 ನಿಮಿಷಗಳಲ್ಲಿ ವರದಿ ಬರಲಿದೆ. ದಾವಣಗೆರೆಯಿಂದ ಇಬ್ಬರು ವೈದ್ಯರು ಬರುತ್ತಿದ್ದಾರೆ, ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಅವರ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.