ರಾಜ್ಯ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಮಾಜಿಕ ಕಾರ್ಯಕರ್ತ, ಖ್ಯಾತ ವೈದ್ಯ ಡಾ.ಗುರುರಾಜ್ ಹೆಬ್ಬಾರ್ ನಿಧನ

Srinivasamurthy VN

ಹಾಸನ: ಖ್ಯಾತ ಸಾಮಾಜಿಕ ಕಾರ್ಯಕರ್ತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈದ್ಯ ಡಾ.ಗುರುರಾಜ್ ಹೆಬ್ಬಾರ್ ಅವರು ನಿಧನರಾಗಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಜನರ ಡಾಕ್ಟರ್ ಎಂದೇ ಹೆಸರಾಗಿದ್ದ, ಸರಳ ಸಜ್ಜನಿಕೆಯ ಡಾಕ್ಟರ್ ಡಾ.ಗುರುರಾಜ್ ಹೆಬ್ಬಾರ್ ಶನಿವಾರ ಕೊನೆಯುಸಿರೆಳೆದಿದ್ದಾರೆ. ವೈದ್ಯ ವೃತ್ತಿ ಜೊತೆಗೆ ಸಮಾಜ ಸೇವೆಯನ್ನೂ ಬದುಕಾಗಿಸಿಕೊಂಡಿದ್ದ ಹಿರಿಯ ವೈದ್ಯ ಡಾ. ಗುರುರಾಜ ಹೆಬ್ಬಾರ್(77) ಇಂದು ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. 

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆಪ್ತರು, ಅಭಿಮಾನಿಗಳು ಕಳೆದ ಆಗಸ್ಟ್ 19 ರಂದು ನಗರದ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿತ್ತು. ಜೀವನವಿಡಿ ಜನರಿಗಾಗಿ ದುಡಿದ ಅಪರೂಪದ ವ್ಯಕ್ತಿಗೆ ಗೌರವ ಸಮರ್ಪಣೆ ಮಾಡಿದ್ದರು. ಈಗ ಕೆಲವೇ ದಿನಗಳಲ್ಲಿ ಹೆಬ್ಬಾರರು ಎಲ್ಲರನ್ನು ಅಗಲಿ ಮರೆಯಾಗಿದ್ದಾರೆ. ಮೃತರು ತಮ್ಮ ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧುಗಳು, ಸ್ನೇಹಿತರು, ಆಪ್ತರನ್ಮು ಅಗಲಿದ್ದು, ಹೆಬ್ಬಾರ್ ಡಾಕ್ಟರ್ ನಿಧನಕ್ಕೆ ಅಪಾರ ಮಂದಿ ಕಂಬನಿ ಮಿಡಿದಿದ್ದಾರೆ.

ಹೆಬ್ಬಾರರು ಸಮಾಜ ಸೇವೆಗಾಗಿ ಜಿಲ್ಲೆಯಾದ್ಯಂತ ಜನಪ್ರಿಯರಾಗಿದ್ದರು. ಅವರು ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಹಣವನ್ನು ದಾನ ಮಾಡುತ್ತಿದ್ದರು. ಹೆಬ್ಬಾರ್ ಅವರು, ಸಂಜೀವಿನಿ ಸಹಕಾರಿ ಆಸ್ಪತ್ರೆ, ಕಾಮದೇನು ವೃದ್ಧಾಶ್ರಮದ ಸಂಸ್ಥಾಪಕ ಅಧ್ಯಕ್ಷರು ಮತ್ತು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಆಫ್ ಹಾಸನ ವಿಭಾಗದ ಉಪಾಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಹೆಬ್ಬಾರ್ ಅವರ ಮೃತದೇಹವನ್ನು ಭಾನುವಾರ ಬೆಳಗಿನ ಜಾವದವರೆಗೆ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದ್ದು, ನಂತರ ಕೆಆರ್ ಪುರಂನ ಸಂಜೀವಿನಿ ಸಹಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಬ್ಬಾರ್ ಅವರ ದೇಹವನ್ನು ಅವರು ವೈದ್ಯಕೀಯ ವ್ಯಾಸಂಗ ಮಾಡಿದ ಮೈಸೂರು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗುರುರಾಜ್ ಹೆಬ್ಬಾರ್ ನಿಧನಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಹಾಸನ ಶಾಸಕ ಪ್ರೀತಂ ಜೆ.ಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

1959 ಜ.1 ರಂದು ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳ ತಾಲೂಕಿನ ಸೋಮೇಶ್ವರದಲ್ಲಿ ಜನಿಸಿದ ಗುರುರಾಜ್ ಹೆಬ್ಬರ್, ಬಳಿಕ ಹಾಸನ ತಾಲ್ಲೂಕಿನ ಕಟ್ಟಾಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದ್ದರು. ಹಾಸನದ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ವೈದ್ಯ ರಾಗಿ ತಮ್ಮ ಸೇವೆ ಆರಂಬಿಸಿದ್ದರು, ಆಲೂರು ತಾಲೂಕು ಪಾಳ್ಯದಲ್ಲಿ ಖಾಸಗಿ ಕ್ಲಿನಿಕ್ ತೆರೆದರು. ಬಳಿಕ ಬೈಚನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸಲ್ಲಿಸಿದ ಇವರು, ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಹಾಸನದಲ್ಲಿ ಖಾಸಗಿ ಕ್ಲಿನಿಕ್ ತೆರೆದು, ತರುವಾಯ ಎಂ.ಜಿ.ರಸ್ತೆಯಲ್ಲಿ ಶ್ರೀ ರಾಮಕೃಷ್ಣ ನರ್ಸಿಂಗ್ ಹೋಂ ಸ್ಥಾಪಿಸಿದರು.

ಹೆಬ್ಬಾರ್ ಅವರು ಕೇವಲ ವೈದ್ಯರಷ್ಟೇ ಅಲ್ಲ, ಸಮಾಜ ಸೇವಕರಾಗಿ ತಮ್ಮ ತನು ಮನ ಧನ ವ್ಯಯಿಸಿದರು. ಬಡವರ ಬಂಧುವಾಗಿ, ಬಡವರಿಗಾಗಿಯೇ ಹಾಸನದಲ್ಲಿ ಮೊದಲಿಗೆ ಸಹಕಾರಿ ತತ್ವದಡಿ ಜನಕಲ್ಯಾಣ ರೀಸರ್ಚ್ ಅಂಡ್ ಚಾರಿಟಬಲ್ ಟ್ರಸ್ಟ್ ನಿಂದ ಸಿ.ಟಿ ಸ್ಕ್ಯಾನ್ ಸೆಂಟರ್ ತೆರೆದರು. ಸಂಜೀವಿನಿ ಸಹಕಾರಿ ಆಸ್ಪತ್ರೆ, ಕಾಮಧೇನು ಸಹಕಾರಿ ವಿದ್ಯಾಶ್ರಮ( ವೃದ್ಧಾಶ್ರಮ), ರೈತ ಬಂಧು ಸಹಕಾರಿ ಸಂಸ್ಥೆ, ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌ನಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದ್ದರು.
 

SCROLL FOR NEXT