ರಾಜ್ಯ

ಮಣ್ಣಲ್ಲಿ ಮಣ್ಣಾದ ಉಮೇಶ್ ಕತ್ತಿ, ಬಾಗೇವಾಡಿ ಸಾಹುಕಾರನಿಗೆ ಭಾವಪೂರ್ಣ ವಿದಾಯ

Lingaraj Badiger

ಬೆಳಗಾವಿ: ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದ ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಮಣ್ಣಲ್ಲಿ ಮಣ್ಣಾಗಿದ್ದು, ಬೆಲ್ಲದ ಬಾಗೇವಾಡಿಯ ಸಾಹುಕಾರನಿಗೆ ಸಾವಿರಾರು ಜನ ಭಾವಪೂರ್ಣ ವಿದಾಯ ಹೇಳಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಯ ತೋಟದಲ್ಲಿ ಇಂದು ರಾತ್ರಿ ಸಕಲ ಸರ್ಕಾರಿ ಗೌರವದೊಂದಿಗೆ, ಪಂಚಮಸಾಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.

ಅತ್ಯಕ್ರಿಯೆಯಲ್ಲಿ ವಿವಿಧ ಮಠಾಧೀಶರು ಭಾಗಿಯಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್​ ಯಡಿಯೂರಪ್ಪ, ಶಾಸಕರು, ಸಚಿವರು ಅಂತಿಮ ನಮನ ಸಲ್ಲಿಸಿದರು.

ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಉಮೇಶ್ ಕತ್ತಿ ಅವರನ್ನು ಸಮಾಧಿ ಮಾಡಲಾಯಿತು. ಪುತ್ರ ನಿಖಿಲ್ ಅಂತಿಮ ವಿಧಿವಿಧಾನ ನೆರವೇರಿಸಿದರು.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿದ್ದ 61 ವರ್ಷದ ಉಮೇಶ್ ಕತ್ತಿ ಅವರು ನಿನ್ನೆ ರಾತ್ರಿ 10.30ರ ಸುಮಾರಿಗೆ ಬಾತ್ ರೂಮ್ ಗೆ ತೆರಳಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದರು. ಅವರ ಕುಟುಂಬದವರು ತಕ್ಷಣ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಫಲಕಾರಿಯಾಗದೆ ನಿಧನರಾಗಿದ್ದರು.

SCROLL FOR NEXT