ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯ ಪರಿಣಾಮ ಉಂಟಾಗಿರುವ ಹಾನಿಯ ಬಗ್ಗೆ ಕೇಂದ್ರ ಅಧ್ಯಯನ ತಂಡದೊಂದಿಗೆ ಇಂದು ಸುದೀರ್ಘವಾಗಿ ಚರ್ಚೆ ಮಾಡಲಾಗಿದ್ದು ರಾಜ್ಯದ ಪರಿಸ್ಥಿತಿ ವಿವರಿಸಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಳೆದ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಂದಿರುವ ಮಳೆಯ ಬಗ್ಗೆ ವಿವರಗಳನ್ನು ನೀಡಲಾಗಿದೆ. ದಕ್ಷಿಣ ಹಾಗೂ ಉತ್ತರ ಒಳನಾಡು, ಕರಾವಳಿ, ಬೆಂಗಳೂರಿನಲ್ಲಿ ಪ್ರವಾಹ ಉಂಟಾಗಿದೆ ಎಂಬ ವಿವರಗಳನ್ನು ನೀಡಲಾಗಿದೆ. ಬೆಳೆ ಮತ್ತು ಮನೆಗಳಿಗೆ ಆಗಿರುವ ಹಾನಿ, ಮೂಲಸೌಕರ್ಯಕ್ಕೆ ಆಗಿರುವ ಹಾನಿ, ಜನಜಾನುವಾರುಗಳಿಗೆ ಆಗಿರುವ ಪ್ರಾಣಹಾನಿ ಕುರಿತ ವಿವರಗಳನ್ನು ನೀಡಿದೆ. ಅವರು ನಾಲ್ಕು ತಂಡಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು, ಅವರು ಭೇಟಿ ನೀಡಿ ಬಂದ ನಂತರ ಮತ್ತೊಂದು ಸಭೆ ನಡೆಸಿ ಅಂತಿಮವಾದ ಮನವಿಯನ್ನು ನೀಡಲಾಗುವುದು. ಕಳೆದ ವಾರವೇ ಒಂದು ಮನವಿ ಕಳುಹಿಸಲಾಗಿತ್ತು. ಈಗ ಅಪ್ ಡೇಟ್ ಮಾಡಿ ಮತ್ತೊಮ್ಮೆ ವಿಸ್ತೃತ ಮನವಿ ನೀಡಲಾಗುವುದು ಎಂದರು.
ಬೆಂಗಳೂರಿನ ಜನರಿಗೆ ಆಗಿರುವ ಸಮಸ್ಯೆ, ಕೆರೆಗಳು ತುಂಬಿ, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿರುವುದು, ನಷ್ಟದ ಪ್ರಾಥಮಿಕ ಅಂದಾಜು ಮಾಡಿರುವುದು ತಿಳಿಸಲಾಗಿದೆ. ಮೀನುಗಾರರ ಹಡಗುಗಳಿಗೆ ಹಾನಿಯಾಗಿರುವುದು, ಭೂ ಕುಸಿತವಾಗಿರುವ ಪ್ರಮುಖ ಅಂಶಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಮಳೆ-ಪ್ರವಾಹ ಪರಿಸ್ಥಿತಿ: ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಲು ಕೇಂದ್ರ ತಂಡಕ್ಕೆ ಮುಖ್ಯಮಂತ್ರಿ ಮನವಿ
ಕೆಲವು ನಗರ ಪ್ರದೇಶಗಳಲ್ಲಿ ಅಂಗಡಿಗಳಿಗೆ, ವಾಣಿಜ್ಯ ಸಂಕೀರ್ಣ ಗಳಲ್ಲಿ ನೀರು ನುಗ್ಗಿದ್ದು, ತೊಂದರೆಯಾಗಿದೆ. ಅವರಿಗೆ ಎನ್.ಡಿ.ಆರ್.ಎಫ್ ನಿಯಮಗಳಲ್ಲಿ ಪರಿಹಾರ ಒದಗಿಸಲು ಅವಕಾಶವಿಲ್ಲ. ಅದನ್ನು ಅಳವಡಿಸಿಕೊಳ್ಳಬೇಕು. ಮೀನುಗಾರರಿಗೆ ಪರಿಹಾರ ನೀಡುವುದನ್ನು ಅಳವಡಿಸಿಕೊಳ್ಳಬೇಕು. ಭೂ ಕುಸಿತಕ್ಕೆ ವಿಶೇಷವಾದ ಪರಿಹಾರ ನೀಡಬೇಕು ಎಂದು ಒತ್ತಿ ಹೇಳಲಾಗಿದೆ. ಕೆರೆಗಳು ತುಂಬಿರುವ ಹಿನ್ನೆಲೆಯಲ್ಲಿ ವಿಶೇಷ ಅನುದಾನ ನೀಡಬೇಕು. ಪ್ರವಾಹ ಬಂದಾಗ 2-3 ದಿನಗಳಲ್ಲಿ ನೀರು ಇಳಿಯುತ್ತದೆ. ಆದರೆ ಪ್ರತಿದಿನ ಪ್ರವಾಹ ಬರುತ್ತಿದೆ. ಅವರು ವೀಕ್ಷಣೆ ಮಾಡಿ ಬಂದ ನಂತರ ಇನ್ನಷ್ಟು ಮಾಹಿತಿ ನೀಡಿ ಮನವರಿಕೆ ಮಾಡಿಕೊಡಲಾಗುವುದು ಎಂದರು.
ರಾಜ್ಯದ ವಿವಿದೆಡೆ ನಾಲ್ಕು ತಂಡಗಳ ಭೇಟಿ
ಬೆಂಗಳೂರಿನ ಮಹದೇವಪುರಕ್ಕೆ ತಂಡವನ್ನು ಕಳುಹಿಸಲಾಗಿದೆ. ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ರಾಮನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ ಉಡುಪಿ, ಕಾರವಾರ ಕ್ಕೆ ಒಂದು ತಂಡ ತೆರಳಲಿದೆ. ಮತ್ತೊಂದು ತಂಡ ಚಿತ್ರದುರ್ಗ, ಚಿಕ್ಕಮಗಳೂರು, ಮರರೊಂದು ಬೀದರ್ ಗುಲ್ಬರ್ಗಾಕ್ಕೆ ತೆರಳಲಿದೆ ಎಂದರು.