ರಾಜ್ಯ

ಉಮೇಶ್ ಕತ್ತಿ ನಿಧನ ಹಿನ್ನಲೆ: ಬಿಜೆಪಿ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಿಕೆ

Srinivasamurthy VN

ಬೆಂಗಳೂರು: ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ಮರಣದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಜನೋತ್ಸವ ಕಾರ್ಯಕ್ರಮವನ್ನು ಮತ್ತೆ ಮುಂದೂಡಿಕೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯ ಅನಾವರಣ 'ಜನೋತ್ಸವ' ಸಮಾವೇಶವು ನಾಳೆ ಅಂದರೆ 8 ಸೆಪ್ಟೆಂಬರ್ 2022 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಪಸ್ಥಿತಿಯಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿತ್ತು. ಆದರೆ ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ಮರಣದಿಂದಾಗಿ ಬಿಜೆಪಿ ಕಾರ್ಯಕ್ರಮವನ್ನು ಭಾನುವಾರಕ್ಕೆ ಮುಂದೂಡಿದೆ.

ಈ ಬಗ್ಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಹಿತಿ ನೀಡಿದ್ದು, ಆತ್ಮೀಯ ಸ್ನೇಹಿತರು ಹಾಗೂ ಸಂಪುಟಗ ಹಿರಿಯ ಸಹೋದ್ಯೋಗಿಗಳು ಆದ ಉಮೇಶ್ ಕತ್ತಿ ಅವರು ಅಕಾಲಿಕ ನಿಧನ ಅತೀವ ನೋವು ತಂದಿದೆ. ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಅಂತೆಯೇ ಮೂರು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದ್ದು, ಈ ಸಂಬಂಧ ಎಲ್ಲ ರೀತಿಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.

ಅಂತೆಯೇ ನಾಳೆ ನಿಗದಿಯಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರ ಮುಂದೂಡಿಕೆ ಮಾಡಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

2ನೇ ಬಾರಿಗೆ ಜನೋತ್ಸವ ಮುಂದೂಡಿಕೆ
ಇನ್ನು 2ನೇ ಬಾರಿಗೆ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆಯಾಗಿದ್ದು, ಈ ಹಿಂದೆ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ರಾಜ್ಯದಲ್ಲಿ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಅಂದು ಕಾರ್ಯಕ್ರಮವನ್ನು ನಾಳೆಗೆ ಅಂದರೆ ಸೆಪ್ಟೆಂಬರ್ 8ಕ್ಕೆ ಮುಂದೂಡಲಾಗಿತ್ತು. ಆದರೆ ಇಂದು ಉಮೇಶ್ ಕತ್ತಿ ಅವರ ಅಕಾಲಿಕ ಮರಣದ ಹಿನ್ನಲೆಯಲ್ಲಿ ಮತ್ತೆ ಕಾರ್ಯಕ್ರಮವನ್ನು ಭಾನುವಾರಕ್ಕೆ ಮುಂದೂಡಲಾಗಿದೆ.

SCROLL FOR NEXT