ರಾಜ್ಯ

ಪ್ರಧಾನಿ ಮೋದಿ ಜನ್ಮ ದಿನ ಹಿನ್ನೆಲೆ; ನಾಳೆಯಿಂದ ಅ.2 ರವರೆಗೆ ವಿಶೇಷ ಆರೋಗ್ಯ ಅಭಿಯಾನ- ಡಾ. ಕೆ.ಸುಧಾಕರ್

Nagaraja AB

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ನಾಳೆಯಿಂದ ಮಹಾತ್ಮ ಗಾಂಧಿ ಜಯಂತಿವರೆಗೆ ರಾಜ್ಯದಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಸೇರಿದಂತೆ ವಿಶೇಷ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಈ ಅಭಿಯಾನದ ರೂಪುರೇಷೆ ಸಿದ್ದಪಡಿಸಲು ವಿವಿಧ ಆಸ್ಪತ್ರೆಗಳ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳೊಂದಿಗೆ ಇಂದು ವಿಡಿಯೋ ಸಭೆ ನಡೆಸಿದ ಸಚಿವರು, ಈ ಅಭಿಯಾನಕ್ಕೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಾಳೆ ಚಾಲನೆ ದೊರೆಯಲಿದೆ ಎಂದರು.

ನವಜಾತ ಶಿಶುವಿನಿಂದ ಆರಂಭವಾಗಿ ವಯೋವೃದ್ಧರವರೆಗೂ ಸರ್ಕಾರ ನೀಡಿರುವ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಚಿಕಿತ್ಸೆ, ತಪಾಸಣೆ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ಜಿಲ್ಲಾ ಮಟ್ಟ ಅಥವಾ ತಾಲೂಕು ಮಟ್ಟದಲ್ಲಿ ತಪಾಸಣೆ ವ್ಯವಸ್ಥೆ ಮಾಡಿ, ಜನರೇ ಮುಂದೆ ಬಂದು ತಪಾಸಣೆ ಮಾಡಿಸಿಕೊಳ್ಳಲು ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

8,9,10ನೇ ವಯಸ್ಸಿನ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಬೇಕು, ಇಲ್ಲಿಯವರೆಗೂ 35 ಲಕ್ಷ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಗಳನ್ನು ನೀಡಲಾಗಿದ್ದು, ಇನ್ನೂ 65 ಲಕ್ಷದಷ್ಟು ಕಾರ್ಡ್ ಗಳನ್ನು ನೀಡಿ 1 ಕೋಟಿ ಗುರಿ ತಲುಪಬೇಕು ಎಂದು ಸಚಿವರು ಸೂಚನೆ ನೀಡಿದರು.

SCROLL FOR NEXT