ರಾಜ್ಯ

ವೈರಲ್ ವಿಡಿಯೋ: ಪ್ರವಾಸಿಗರ ಹೊಣೆಗೇಡಿತನ: ಆಹಾರವೆಂದು ಪ್ಲಾಸ್ಟಿಕ್ ತಿಂದ ಆನೆ!!

Srinivasamurthy VN

ಮೈಸೂರು: ಪ್ರವಾಸಿಗರ ಹೊಣೆಗೇಡಿತನದಿಂದಾಗಿ ಕಾಡಾನೆಯೊಂದು ಪ್ಲಾಸ್ಟಿಕ್ ಕವರ್ ಅನ್ನು ಆಹಾರವೆಂದು ತಿಳಿದು ತಿಂದ ಘಟನೆ ನಡೆದಿದೆ.

ಅಭಯಾರಣ್ಯಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ನಿಷೇಧಿತ ಪ್ಲಾಸ್ಟಿಕ್ ಕವರ್ ಅನ್ನು ಆನೆ ಬಳಿ ಎಸೆದುಹೋಗಿದ್ದಾರೆ. ಅದೇ ಪ್ಲಾಸ್ಟಿಕ್ ಅನ್ನು ಸೊಂಡಿಲಿನಿಂದ ತೆಗೆದುಕೊಂಡ ಆನೆ ಕೆಲ ಹೊತ್ತು ಅದನ್ನು ಮುದುರಿ ಬಳಿಕ ಬಾಯಿಗೆ ಹಾಕಿಕೊಂಡಿದೆ.

ಆನೆ ಆ ಪ್ಲಾಸ್ಟಿಕ್ ಅನ್ನು ತಿಂದು ಹಾಕಿತೇ ಅಥವಾ ಅಧನ್ನು ಉಗುಳಿತೆ ಎಂಬುದು ತಿಳಿದಿಲ್ಲವಾದರೂ ಒಂದು ವೇಳೆ ಅದನ್ನು ಆನೆ ತಿಂದಿದ್ದೇ ಆದರೆ ಅದರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಭಯಾರಣ್ಯಗಳಿಗೆ ಭೇಟಿ ನೀಡುವ ಪ್ರವಾಸಿಗರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದು. ಪ್ಲಾಸ್ಟಿಕ್ ತ್ಯಾಜ್ಯವನ್ನು ಸೂಚಿಸಲಾದ ಕಸದ ಡಬ್ಬಿಗಳಲ್ಲೇ ಹಾಕಬೇಕು ಎಂದು ಮನವಿ ಮಾಡಿದ್ದಾರೆ.

ವಿಡಿಯೋ ಬಂಡೀಪುರದಲ್ಲ.. ತಮಿಳುನಾಡಿನ ಮದುಮಲೈನದ್ದು: ಅಧಿಕಾರಿಗಳ ಸ್ಪಷ್ಟನೆ
ಇನ್ನು ಆನೆ ಪ್ಲಾಸ್ಟಿಕ್ ತಿಂದ ವಿಡಿಯೋ ಬಂಡೀಪುರದಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಇದು ತಮಿಳುನಾಡಿನಲ್ಲಿ ಸೆರೆ ಹಿಡಿಯಲಾದ ವಿಡಿಯೋ ಎನ್ನಲಾಗಿದೆ. ದೃಶ್ಯವನ್ನು ಸೆರೆ ಹಿಡಿದವರು ತಮಿಳು‌ ಭಾಷೆಯಲ್ಲಿ ಮಾತನಾಡುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿದೆ.  ಈ ಬಗ್ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ರಮೇಶ್ ಕುಮಾರ್, 'ಎರಡು ದಿನಗಳ ಹಿಂದೆಯೇ ಈ ವಿಡಿಯೊ ನೋಡಿದ್ದೇನೆ. ಇದು ನಮ್ಮ ಬಂಡೀಪುರದ್ದಲ್ಲ. ನೆರೆಯ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ' ಎಂದು ಹೇಳಿದ್ದಾರೆ.
 

SCROLL FOR NEXT