ರಾಜ್ಯ

ಜಾನುವಾರು ವ್ಯಾಪಾರಿ ಹತ್ಯೆ: ಪುನೀತ್ ಕೆರೆಹಳ್ಳಿ ಬಂಧನಕ್ಕಾಗಿ ನಾಲ್ಕು ತಂಡಗಳ ರಚನೆ

Nagaraja AB

ಬೆಂಗಳೂರು: ಕನಕಪುರದ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಜಾನುವಾರು ಸಾಗಟ ವಾಹನದ ಸಹಾಯಕ ಚಾಲಕ ಇದ್ರೀಸ್ ಪಾಷಾ (39) ಎಂಬಾತನನ್ನು ಹತ್ಯೆಗೈದ ಆರೋಪ ಹೊತ್ತಿರುವ ಬಲಪಂಥೀಯ ಕಾರ್ಯಕರ್ತ ಪುನಿತ್ ಕೆರೆಹಳ್ಳಿ ಬಂಧಿಸಲು ರಾಮನಗರ ಜಿಲ್ಲಾ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ. 

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಬಿ.ಆರ್. ರವಿಕಾಂತೇಗೌಡ,  ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಫೋರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ತಂಡ  ಮರಣೋತ್ತರ ಪರೀಕ್ಷೆಯನ್ನು ನಡೆಸಿದೆ ಮತ್ತು (ಪಾಶಾ) ಸಾವಿಗೆ ನಿಖರವಾದ ಕಾರಣ ತಿಳಿಯಲು  ವರದಿಗಾಗಿ ಕಾಯುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದರು. 

ಸಾತನೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಒಂದು ತಂಡ ರಚನೆಯಾಗಿದ್ದರೆ, ಉಪವಿಭಾಗದ ಡಿವೈಎಸ್ಪಿ ಮತ್ತೊಂದು ತಂಡದ ನೇತೃತ್ವ ವಹಿಸಿದ್ದಾರೆ. ಉಪ ವಿಭಾಗದ ಪೊಲೀಸರು ನೇತೃತ್ವದಲ್ಲಿ ಮತ್ತೇರಡು ತಂಡ ರಚಿಸಲಾಗಿದೆ.  ಸಾತನೂರು ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿ ಪಾಷಾ ಶವ ಪತ್ತೆಯಾದ ನಂತರ ಕೆರೆಹಳ್ಳಿ ಸೇರಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಇದ್ರೀಸ್ ಪಾಷಾ ಬಳಿ  ರೂ.2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಕೆರೆಹಳ್ಳಿ:  ಶನಿವಾರ ಮುಂಜಾನೆ ಈ ಘಟನೆ ನಡೆದಿದೆ. ಇರ್ಫಾನ್ (37) ಮತ್ತು ಚಾಲಕ ಸೈಯದ್ ಜಹೀರ್ (40) ಅವರೊಂದಿಗೆ ಇದ್ರೀಸ್ ಪಾಷಾ ಶನಿವಾರ ಮಧ್ಯರಾತ್ರಿ 12.30 ರ ಸುಮಾರಿಗೆ ಸಂತೆಮಾಳ ವೃತ್ತದ ಬಳಿ 15 ಜಾನುವಾರುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದಾಗ ಕೆರೆಹಳ್ಳಿ ಮತ್ತು ಅವರ ಸಂಗಡಿಗರು ವಾಹನ ಅಡ್ಡಗಟ್ಟಿದ್ದಾರೆ. ಈ ವೇಳೆ ಅಪಾಯವನ್ನು ಅರಿತ ಪಾಷಾ ಮತ್ತು ಇರ್ಪಾನ್ ಅಲ್ಲಿಂದ ಪರಾರಿಯಾಗಿದ್ದು,  ಜಹೀರ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೆರೆಹಳ್ಳಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಜಾನುವಾರುಗಳನ್ನು ಖರೀದಿಸಿ ತಮಿಳುನಾಡಿನ ಕೃಷ್ಣಗಿರಿಗೆ ಮಾರಾಟ ಮಾಡಲು ಕೊಂಡೊಯ್ಯಲಾಗುತ್ತಿದೆ ಎಂದು ಜಹೀರ್ ಕೆರೆಹಳ್ಳಿ ಮತ್ತು ಇತರ ನಾಲ್ವರಿಗೆ ವಿವರಿಸಲು ಪ್ರಯತ್ನಿಸಿದರೂ, ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದಿದ್ದು, ಅಕ್ರಮ ದನ ಸಾಗಾಟ ಆರೋಪದಡಿ ಕೆರೆಹಳ್ಳಿ ದೂರು ದಾಖಲಿಸಿದ್ದಾರೆ. ಕೆರೆಹಳ್ಳಿ ವಿರುದ್ಧವೂ ಪ್ರತಿದೂರು ದಾಖಲಾಗಿತ್ತು.

ಶನಿವಾರ ಬೆಳಿಗ್ಗೆ, ಪಾಷಾ ಅವರ ದೇಹವು ಪೊಲೀಸ್ ಠಾಣೆಯಿಂದ ಕೆಲವು ನೂರು ಮೀಟರ್ ದೂರದಲ್ಲಿ ಪತ್ತೆಯಾಗಿದೆ. ದೇಹದ ಮೇಲೆ ಚಿತ್ರಹಿಂಸೆಯ ಗುರುತುಗಳಿತ್ತು. ದನಗಳನ್ನು ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿದ ಕೆರೆಹಳ್ಳಿ ಮತ್ತು ಆತನ ಸಹಚರರು ಪಾಷಾ ಅವರನ್ನು ಹಿಂಬಾಲಿಸಿದ್ದಾರೆಯೇ ಎಂಬುದು ಇನ್ನೂ ಪತ್ತೆಯಾಗಿಲ್ಲ. ಹಂತಕರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪಾಷಾ ಕುಟುಂಬಸ್ಥರು ಠಾಣೆ ಎದುರು ಪ್ರತಿಭಟನೆ ನಡೆಸಿದರು. ಕೆರೆಹಳ್ಳಿ ಸೇರಿ ನಾಲ್ವರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT