ರಾಜ್ಯ

ಹೊನ್ನಾವರದಲ್ಲಿ ಬ್ಲಾಕ್ ಪ್ಯಾಂಥರ್ ಸೆರೆ, ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ

Lingaraj Badiger

ಹೊನ್ನಾವರ(ಉತ್ತರ ಕನ್ನಡ): ಹೊನ್ನಾವರ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಕರಿ ಚಿರತೆಯನ್ನು ಸೆರೆ ಹಿಡಿದಿದ್ದು, ಇಲಾಖೆ ಅಧಿಕಾರಿಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಈ ಬ್ಲಾಕ್ ಪ್ಯಾಂಥರ್ ಅನ್ನು ನೋಡಿದ್ದಾರೆ.

ಕಳೆದೆರಡು ತಿಂಗಳಿಂದ ಹಲವು ಜಾನುವಾರುಗಳ ಸಾವಿಗೆ ಕಾರಣವಾಗಿದ್ದ ಈ ಕರಿ ಚಿರತೆ ಬಗ್ಗೆ ತಲ್ಕೋಡ್ ಗ್ರಾ.ಪಂ.ವ್ಯಾಪ್ತಿಯ ಜನ ತೀವ್ರ ಆತಂಕದಲ್ಲಿದ್ದರು. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ದೂರುಗಳು ಹೆಚ್ಚುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಕರಿ ಚಿರತೆ ಹಿಡಿಯಲು ನಿರ್ಧರಿಸಿ ಯರ್ರೆಅಂಗಡಿ ಸಮೀಪದ ವಂಡೂರು ಎಂಬಲ್ಲಿ ಬೋನನ್ನು ಇಟ್ಟು ಕಾದು ಕುಳಿತಿದ್ದರು. ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬ್ಲ್ಯಾಕ್ ಪ್ಯಾಂಥರ್ ಸೆರೆ ಸಿಕ್ಕಿದ್ದು, ಹೊನ್ನಾವರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

“ಈ ಪ್ರದೇಶದಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ನಡೆಯುತ್ತಿದೆ. ಈ ಸ್ಥಳದಲ್ಲಿ ಸಾಕಷ್ಟು ಚಿರತೆಗಳ ಓಡಾಟ ಇದೆ. ಕರಿ ಚಿರತೆ ಸಿಕ್ಕಿಬಿದ್ದಿದೆ’ ಎಂದು ಹೊನ್ನಾವರ ವಲಯ ಅರಣ್ಯಾಧಿಕಾರಿ ವಿಕ್ರಂ ಅವರು ಹೇಳಿದ್ದಾರೆ.

ಆದರೆ, ದನಗಳ ಮೇಲೆ ದಾಳಿ ಮಾಡಿದ್ದು ಇದೇನಾ ಎಂಬುದು ಇನ್ನೂ ಖಚಿತವಾಗಿಲ್ಲ. "ಇದು ಜಾನುವಾರುಗಳ ಮೇಲೆ ದಾಳಿ ಮಾಡುವ ಪ್ಯಾಂಥರ್ ಆಗಿದೆಯೇ ಎಂಬುದು ಖಚಿತವಿಲ್ಲ. ಇನ್ನೂ ಕೆಲವು ದಿನಗಳವರೆಗೆ ಈ ಪ್ರದೇಶದಲ್ಲಿ ಬಲೆಗಳನ್ನು ಇರಿಸಲಾಗುವುದು. ಇದರಿಂದ ಚುಕ್ಕೆ ಬೆಕ್ಕನ್ನು ಹಿಡಿಯಲು ಸಾಧ್ಯವಾಗುತ್ತದೆ ಎಂದು" ಎಂದು ವಿಕ್ರಮ್ ಅವರು ತಿಳಿಸಿದ್ದಾರೆ.

ಏತನ್ಮಧ್ಯೆ, ಸುಮಾರು 4 ವರ್ಷ ವಯಸ್ಸಿನ ಕರಿ ಚಿರತೆ ನೋಡಲು ಜನ ಮುಗಿಬೀಳುತ್ತಿದ್ದು, ಈ ಚಿರತೆಯನ್ನು ಅದು ಸಿಕ್ಕಿಬಿದ್ದ ಸ್ಥಳದಿಂದ ದೂರದಲ್ಲಿರುವ ಸುರಕ್ಷಿತ ಆವಾಸಸ್ಥಾನಗಳಿಗೆ ಬಿಡಲಾಗಿದೆ ಎಂದು ಇಲಾಖೆ ತಿಳಿಸಿದೆ. 

SCROLL FOR NEXT