ಬೆಂಗಳೂರು: ಸರ್ಕಾರದ ಕಳಪೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯಿಂದಾಗಿ ಪಿಯುಸಿ ಮಕ್ಕಳ ಭವಿಷ್ಯವನ್ನು ಸರ್ಕಾರ ಅಂಧಕಾರಕ್ಕೆ ತಳ್ಳಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.
ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಎಎಪಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, “ಕರ್ನಾಟಕದಲ್ಲಿ ಪಿಯುಸಿ ಫಲಿತಾಂಶ ಬಂದಿದೆ. ಖಾಸಗಿ ಶಾಲೆಗಳಲ್ಲಿ 76.67% ಫಲಿತಾಂಶ, ಸರ್ಕಾರಿ ಶಾಲೆಗಳಲ್ಲಿ 63.63% ಫಲಿತಾಂಶ ಬಂದಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವೆ ಹೋಲಿಕೆ ಮಾಡುವುದು ತುಂಬಾ ಅವಶ್ಯಕ. ಏಕೆಂದರೆ, ಎಎಪಿ ನಿಂತಿರುವುದೇ ಸರ್ಕಾರಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ವಿಚಾರದ ಮೇಲೆ” ಎಂದರು.
“ಕಳೆದ ಕೊವಿಡ್ ಸಮಯದಲ್ಲಿ ಎಲ್ಲ ರಾಜ್ಯದಲ್ಲೂ ಮಕ್ಕಳನ್ನ ತೇರ್ಗಡೆ ಮಾಡಲಾಗಿತ್ತು. ಆದರೆ, ದೆಹಲಿಯಲ್ಲಿ 2021ರಲ್ಲಿ 99.96% ರಷ್ಟು ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಬಂದಿದೆ. ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 63.63% ಪಿಯುಸಿ ಫಲಿತಾಂಶ ಬಂದಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಗುಣಮಟ್ಟದ ಶಿಕ್ಷಣದ ಜೊತೆಗೆ ಶೇ.ರಷ್ಟಪ ಫಲಿತಾಂಶ ಹೊರತರುತ್ತೇವೆ, ಇದಕ್ಕೆ ದೆಹಲಿ ಸರ್ಕಾರಿ ಶಾಲೆಗಳು ಸಾಕ್ಷಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಅವರು ಶಿಕ್ಷಣ ತಜ್ಞರಂತೆ ಮಾತನಾಡುತ್ತಿಲ್ಲ, ರಾಜಕಾರಣಿಗಳಂತೆ ಮಾತನಾಡುತ್ತಿದ್ದಾರೆ. ಇದನ್ನು ರಾತ್ರೋರಾತ್ರಿ ಮಾಡಲು ಸಾಧ್ಯವಿಲ್ಲ. ಉತ್ತಮ ಬೋಧನಾ ವಿಧಾನಗಳನ್ನು ಬಳಸಿಕೊಂಡು ಮೂಲಸೌಕರ್ಯ ಮತ್ತು ಬೋಧನಾ ಗುಣಮಟ್ಟವನ್ನು ಸುಧಾರಿಸಲು ನಾವು ಕೆಲಸ ಮಾಡಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದರು.