ರಾಜ್ಯ

ಸುಡಾನ್‌ನಲ್ಲಿ ಸಿಲುಕಿರುವ ರಾಜ್ಯದ 200 ಆದಿವಾಸಿಗಳು ಶೀಘ್ರದಲ್ಲೇ ಬೆಂಗಳೂರಿಗೆ ಆಗಮನ

Lingaraj Badiger

ಬೆಂಗಳೂರು: ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗದ 200 ಕ್ಕೂ ಹೆಚ್ಚು ಜನ ಪೋರ್ಟ್ ಸುಡಾನ್‌ಗೆ ತೆರಳುವ ಮಾರ್ಗದಲ್ಲಿ ಬಸ್‌ಗಳನ್ನು ಹತ್ತಿದ್ದು, ಶೀಘ್ರದಲ್ಲೇ ಅವರು ಬೆಂಗಳೂರಿಗೆ ತಲುಪಲಿದ್ದಾರೆ ಎಂದು ವರದಿಯಾಗಿದೆ. 

ಭಾರತ ಸರ್ಕಾರ ಸುಡಾನ್ ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಮರಳಿ ಕರೆತರಲು ಆರಂಭಿಸಿದ ಆಪರೇಷನ್ ಕಾವೇರಿ ಅಡಿಯಲ್ಲಿ ಈ ಆದಿವಾಸಿಗಳು ಸಹ ಆಗಮಿಸುತ್ತಿದ್ದು, ಅವರು ಎರಡನೇ ಬ್ಯಾಚ್‌ನಲ್ಲಿದ್ದಾರೆ ಎನ್ನಲಾಗಿದೆ.

ಮೈಸೂರು, ಶಿವಮೊಗ್ಗ, ದಾವಣಗೆರೆ, ಎಚ್‌ಡಿ ಕೋಟೆ, ಚನ್ನಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬುಡಕಟ್ಟು ಗ್ರಾಮಗಳಿಗೆ ಸೇರಿದ 200ಕ್ಕೂ ಹೆಚ್ಚು ಜನ ಇಂದು ನಾಲ್ಕು ಬಸ್ಸುಗಳಲ್ಲಿ ಪೋರ್ಟ್ ಸುಡಾನ್ ನಿಂದ ಹೊರಟಿದ್ದಾರೆ. 

"ನಾವು ಸಮಾಧಾನ ಮತ್ತು ಸಂತೋಷವಾಗಿದ್ದೇವೆ. ನಾವು ಇಲ್ಲಿಂದ ಸಂಪೂರ್ಣವಾಗಿ ಹೊರಡುವವರೆಗೆ, ಆತಂಕ ಮತ್ತು ಭಯ ಇದ್ದೆ ಇದೆ. ಗುಂಡಿನ ಸದ್ದು ಮತ್ತು ಬಾಂಬ್ ಸ್ಫೋಟದ ಸದ್ದುಗಳು ನಮ್ಮನ್ನು ಇನ್ನೂ ಕಾಡುತ್ತಿವೆ” ಎಂದು ಆದಿವಾಸಿಗಳಲ್ಲಿ ಒಬ್ಬರು ಹೇಳಿದ್ದಾರೆ.

“ನಾವು ಮಂಗಳವಾರ ಮಧ್ಯಾಹ್ನ ಬಸ್ಸುಗಳನ್ನು ಹತ್ತಿದೆವು. ಪೋರ್ಟ್ ಸುಡಾನ್ ತಲುಪಲು ರಸ್ತೆಯ ಮೂಲಕ ಸುಮಾರು 7-8 ಗಂಟೆಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲಿಂದ ಸಮುದ್ರ ಮಾರ್ಗವಾಗಿ ಸೌದಿ ಅರೇಬಿಯಾಕ್ಕೆ ಹೋಗುತ್ತೇವೆ. ನಮ್ಮ ದಾಖಲೆಗಳ ಪರಿಶೀಲನೆಯ ನಂತರ, ಬೆಂಗಳೂರಿಗೆ ನೇರ ವಿಮಾನವನ್ನು ಹತ್ತಲು ನಮಗೆ ಅನುಮತಿಸಲಾಗುವುದು ”ಎಂದು ಒಂಬತ್ತು ತಿಂಗಳ ಹಿಂದೆ ತನ್ನ ಹೆಂಡತಿಯೊಂದಿಗೆ ಸುಡಾನ್‌ಗೆ ಹೋಗಿದ್ದ ಶಾಂಡಿ ಅವರು ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ 43 ಜನರ ರಕ್ಷಣೆ
ದಾವಣೆಗೆರೆ ಜಿಲ್ಲೆಯ ಎರಡೂ ಗ್ರಾಮಗಳಾದ ಗೋಪನಾಳದ 30 ಮತ್ತು ಅಸ್ತಪನಹಳ್ಳಿಯ 13 ಜನರನ್ನು ಯುದ್ಧ ಪೀಡಿತ ಸುಡಾನ್‌ನಿಂದ ರಕ್ಷಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪ್ಶಿ ಅವರು ಮಂಗಳವಾರ ತಿಳಿಸಿದ್ದಾರೆ.

ಭಾರತೀಯ ನಾಗರಿಕರನ್ನು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ರಕ್ಷಿಸಿದ್ದಾರೆ ಮತ್ತು ಪೋರ್ಟ್ ಸುಡಾನ್‌ಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT