ರಾಜ್ಯ

ಉಚಿತ ಉಡುಗೊರೆ ನೀಡುವ ಪಕ್ಷಗಳಿಗೆ ಮತ ಹಾಕಬೇಡಿ: ಮತದಾರರಿಗೆ ಸಿಎಂ ಬೊಮ್ಮಾಯಿ ಮನವಿ

Manjula VN

ಹುಬ್ಬಳ್ಳಿ/ಧಾರವಾಡ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪ್ರಚಾರದ ಸಂದರ್ಭದಲ್ಲಿ ಉಚಿತ ಉಡುಗೊರೆ ನೀಡುವ ಪಕ್ಷಗಳಿಗೆ ಮತ ಹಾಕದಂತೆ ಮತದಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಮನವಿ ಮಾಡಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಪಕ್ಷದ ‘ಜಯವಾಹಿನಿ'ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಪರ ಪ್ರಚಾರಕ್ಕೆ ಬಂದಿರುವುದು ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಬದಲಾವಣೆ ತರಲಿದೆ. ಅಮಿತ್ ಶಾ ಅವರೊಂದಿಗೆ ನಡೆಸಿದ ಸಭೆಯಲ್ಲಿ ಪ್ರಚಾರವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದರ ಕುರಿತು ಅವರು ಹಲವಾರು ಸಲಹೆಗಳು ಮತ್ತು ಸೂಚನೆಗಳನ್ನು ನೀಡಿದರು ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ 'ಲಿಂಗಾಯತ ಸಿಎಂ ಭ್ರಷ್ಟ' ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು (ಸಿದ್ದರಾಮಯ್ಯ) ಸುಳ್ಳು ಆರೋಪಗಳನ್ನು ಮಾಡಿ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. "ನನ್ನ ವಿರುದ್ಧದ ಒಂದೇ ಒಂದು ಆರೋಪವನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಯಾರು ಸುಳ್ಳು ಹೇಳುತ್ತಿದ್ದಾರೆಂದು ಜನರಿಗೆ ತಿಳಿದಿದೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಅವರೇ ಸ್ವತಃ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದಾರೆಂದು ಹೇಳಿದರು.

ಬಳಿಕ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭ್ರಷ್ಟಾಚಾರಕ್ಕೆ ಸಮಾನಾರ್ಥಕ  ಪದವೇ ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮಾತನಾಡುವುದು ಹಾಸ್ಯಾಸ್ಪದವಾಗಿದೆ, ಕಾಂಗ್ರೆಸ್ ಪಕ್ಷದ ಎಷ್ಟು ನಾಯಕರು ಜೈಲಿನಲ್ಲಿದ್ದಾರೆ ಮತ್ತು ಜಾಮೀನಿನ ಮೇಲೆ ಹೊರಬಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು. ಕಾಂಗ್ರೆಸ್ ವೊಂದು ಉತ್ತಮ ನಾಯಕರು ಮತ್ತು ದೂರದೃಷ್ಟಿ ಇಲ್ಲದ ಪಕ್ಷವಾಗಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಸುಳ್ಳು ಆಶ್ವಾಸನೆ ನೀಡುವ ಹಾಗೂ ಉಚಿತ ಕೊಡುಗೆ ನೀಡುವ ಯಾವುದೇ ಪಕ್ಷಕ್ಕೆ ಮತ ಹಾಕದಂತೆ ಮುಖ್ಯಮಂತ್ರಿಗಳು ಮತದಾರರಲ್ಲಿ ಮನವಿ ಮಾಡಿಕೊಂಡರು.

ಇಂತಹ ಅವಾಸ್ತವಿಕ ಭರವಸೆಗಳನ್ನು ನೀಡುವ ನಾಯಕರು ತಮ್ಮ ಲಾಭವನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಾರೆ. ಅಂತಹ ನಾಯಕರು ಮತ್ತು ಪಕ್ಷಗಳು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವುದಿಲ್ಲ, ಮತದಾರರು ರಾಷ್ಟ್ರದ ಅಭಿವೃದ್ಧಿಯತ್ತ ಗಮನಹರಿಸಬೇಕು, ಅದು ಸರಿಯಾದ ಅಭ್ಯರ್ಥಿಗೆ ಮತ ಹಾಕುವುದರಿಂದ ಮಾತ್ರ ಸಾಧ್ಯ ಎಂದರು.

ಚುನಾವಣೆ ನಿಮಿತ್ತ ಮುಖ್ಯಮಂತ್ರಿಗಳು ಮಂಗಳವಾರ ಗ್ರಾಮೀಣ ಮತ್ತು ನಗರದಲ್ಲಿ ನಡೆದ ಹಲವು ರ್ಯಾಲಿಗಳಲ್ಲಿ ಭಾಗವಹಿಸಿದ್ದರು.

ಧಾರವಾಡ ಜಿಲ್ಲೆ ನನ್ನ ತವರು. ತಮ್ಮ ತಂದೆ ದಿವಂಗತ ಎಸ್‌ಆರ್ ಬೊಮ್ಮಾಯಿ ಅವರು ಜಿಲ್ಲೆಯ ಮತ್ತು ಅದರ ಜನರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದರು ಎಂದು ಹೇಳಿದರು. ಜೊತೆಗೆ ತಂದೆಯ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಬೊಮ್ಮಾಯಿ ಅವರೊಂದಿಗೆ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್, ಗ್ರಾಮಾಂತರ ಅಭ್ಯರ್ಥಿ ಅಮೃತ್ ದೇಸಾಯಿ ಇದ್ದರು.

SCROLL FOR NEXT