ರಾಜ್ಯ

ವಿಧಾನಸಭಾ ಚುನಾವಣೆ: ಮತದಾರರನ್ನು ಓಲೈಸಲು ದೇವಾಲಯ, ಚರ್ಚ್, ಮಸೀದಿಗಳಿಗೆ ಅಭ್ಯರ್ಥಿಗಳ ಭೇಟಿ

Manjula VN

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 11 ದಿನಗಳಷ್ಟೇ ಬಾಕಿ ಉಳಿದಿದ್ದು, ಮತದಾರರ ಓಲೈಸಲು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ದೇವಾಲಯ, ಚರ್ಚ್ ಹಾಗೂ ಮಸೀದಿಗಳಿಗೆ ಭೇಟಿ ನೀಡುತ್ತಿದ್ದಾರೆ.

ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಲು ಶುಕ್ರವಾರ ಹಾಗೂ ಭಾನುವಾರ ಸಾಕಷ್ಟು ಜನರು ಸೇರುತ್ತಾರೆ. ಹೀಗಾಗಿ ಮತದಾರರನ್ನು ಓಲೈಸಲು ಭಾನುವಾರ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಚರ್ಚ್'ಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ನಿನ್ನೆಯಷ್ಟೇ ಹೆಬ್ಬಾಳದಲ್ಲಿ ಕಾಂಗ್ರೆಸ್ ಮುಖಂಡ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಎಸ್ ಅವರು, ಜೆಸಿ ನಗರ ವಾರ್ಡ್ ಮುನಿರೆಡ್ಡಿ ಪಾಳ್ಯದ ಬಿಲಾಲ್ ಮಸೀದಿಗೆ ಭೇಟಿ ನೀಡಿ, ಅಲ್ಲಿದ್ದ ಜನರೊಂದಿಗೆ ಮಾತುಕತೆ ನಡೆಸಿದರು.

ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಡುತ್ತಿದ್ದವರಿಗೆ ಕರಪತ್ರ ನೀಡಿ ಕಾಂಗ್ರೆಸ್'ಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.. ಭೈರತಿ ಸುರೇಶ್ ಅವರ ಆಪ್ತ ಅಬ್ದುಲ್ ವಾಜಿದ್ ಅವರು ಭುವನೇಶ್ವರಿ ನಗರದ ಮೆಕ್ಕಾ ಮಸೀದಿಯಲ್ಲಿ ಪ್ರಚಾರ ನಡೆಸಿದರು.

ಈ ನಡುವೆ ಹೆಬ್ಬಾಳದ ಇತರ ಮಸೀದಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಮೊಹಿದ್ ಅಲ್ತಾಫ್ ಅವರ ಬೆಂಬಲಿಗರು ಕೂಡ ಪ್ರಚಾರ ನಡೆಸಿದ್ದು ಕಂಡು ಬಂದಿತು.

ಅದೇ ರೀತಿ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು, ಚುನಾವಣಾ ಪ್ರಚಾರದ ಅಂಗವಾಗಿ ಲಾಲ್ ಬಾಗ್ ರಸ್ತೆಯ ಮಾವಳ್ಳಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಗರುಡಾಚಾರ್ ಅವರು, ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವುದು ಮತ್ತು ಅವರ ಮತ ಕೇಳುವುದು ಅಪರಾಧವಲ್ಲ.ಬಾಲ್ಯದ ದಿನಗಳಿಂದಲೂ ಈ ಸಮುದಾಯದ ಬಂಧುಗಳು ಅವಿಭಾಜ್ಯ ಅಂಗವಾಗಿದ್ದಾರೆ. ಅವರೊಂದಿಗೆ ಬಾಂಧ್ಯವನ್ನು ಹಂಚಿಕೊಳ್ಳುತ್ತೇನೆಂದು ಹೇಳಿದರು.

ಈ ನಡುವೆ ಹೆಬ್ಬಾಳದಲ್ಲಿ ಜೆಡಿಎಸ್ ಪಕ್ಷದ ಬೆಂಬಲಿಗರು ಚುನಾವಣಾ ಪ್ರಚಾರ ಕಾರ್ಯಕ್ಕೆ ಮಕ್ಕಳನ್ನು ತೊಡಗಿಸಿಕೊಂಡಿದ್ದರು ಎಂಬ ಆರೋಪಗಳು ಕೇಳಿ ಬರುತ್ತಿವೆ.

ಭುವನೇಶ್ವರಿ ನಗರದ ಮೆಕ್ಕಾ ಮಸೀದಿಯಿಂದ ಹೊರಗೆ ಬರುತ್ತಿದ್ದವರಿಗೆ ಈ ಮಕ್ಕಳು ಕೈಚೀಲಗಳನ್ನ ವಿತರಿಸಿದ್ದು, ಜೆಡಿಎಸ್ ಅಭ್ಯರ್ಥಿ ಮೊಹಿದ್ ಅಲ್ತಾಫ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು ಎಂದು ತಿಳಿದುಬಂದಿದೆ.

SCROLL FOR NEXT