ರಾಜ್ಯ

ಎನ್ಐಎ ಪ್ರಕರಣಗಳ ವಿಚಾರಣೆಗೆ ಇನ್ನೂ ಮೂರು ವಿಶೇಷ ನ್ಯಾಯಾಲಯಗಳ ಸ್ಥಾಪಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Manjula VN

ಬೆಂಗಳೂರು: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣಗಳ ವಿಚಾರಣೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿ ಹೈಕೋರ್ಟ್ ಮೂರು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಹುಬ್ಬಳ್ಳಿ ಗಲಭೆ ಕೇಸ್​ನಲ್ಲಿ ಜಾಮೀನು ನಿರಾಕರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಈ ಕುರಿತ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್​ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ಟಿ ವೆಂಕಟೇಶ್ ನಾಯಕ್ ನೇತೃತ್ವದ ನ್ಯಾಯಪೀಠ, ಎನ್ಐಎ ಪ್ರಕರಣಗಳ ವಿಚಾರಣೆಗೆ 6 ತಿಂಗಳ ಒಳಗಾಗಿ ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಕ್ರಮವಾಗಿ ಮೂರು ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಆದೇಶಿಸಿದೆ. ಅಲ್ಲದೇ, ಎನ್‌ಐಎ ವಿಶೇಷ ನ್ಯಾಯಾಲಯದ​​ ಜಾಮೀನು ನಿರಾಕರಣೆ ಆದೇಶವನ್ನು ಎತ್ತಿಹಿಡಿದಿದೆ.

ಸದ್ಯ ಇಡೀ ರಾಜ್ಯಕ್ಕೆ ಒಂದೇ ಎನ್‌ಐಎ ಕೋರ್ಟ್​ ಇದೆ. ಮುಂದಿನ 6 ತಿಂಗಳಲ್ಲಿ ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯಡಿ ಮೂರು ಹೆಚ್ಚುವರಿ ಎನ್‌ಐಎ ವಿಶೇಷ ನ್ಯಾಯಾಲಯ ರಚನೆ ಮಾಡಲಿ. ಕಳೆದ 9 ವರ್ಷಗಳಿಂದ ಬಾಕಿ ಉಳಿಕಿರುವ ಪ್ರಕರಣಗಳ​ ಇತ್ಯರ್ಥ ಮಾಡಲಿ. ನ್ಯಾಯ ಸಿಗದಿದ್ದಾಗ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಧರ್ಮ, ಜಾತಿ, ಲಿಂಗವನ್ನು ಲೆಕ್ಕಿಸದೆ ಸಕಾಲಕ್ಕೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ ನ್ಯಾಯಾಲಯ ಹೇಳಿದೆ.

ಜನತೆಗೆ ತ್ವರಿತ ನ್ಯಾಯ ಒದಗಿಸಬೇಕು. ರಾಜ್ಯದ ಇತರೆ ಕಂದಾಯ ವಿಭಾಗಗಳಾದ ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶೇಷ ನ್ಯಾಯಾಲಯಗಳ ರಚನೆ ಮಾಡುವುದಕ್ಕೆ ಇದು ಸೂಕ್ತ ಸಮಯ ಎಂದು ನ್ಯಾಯಾಲಯ​​ ಅಭಿಪ್ರಾಯಪಟ್ಟಿದೆ.

SCROLL FOR NEXT