ರಾಜ್ಯ

ಕಾರ್ಕಳ: ನೈತಿಕ ಪೊಲೀಸ್ ಗಿರಿ ಪ್ರಕರಣ 5 ಮಂದಿ ಬಂಧನ

Srinivas Rao BV

ಕಾರ್ಕಳ: ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ವರದಿಯಾಗಿದ್ದು ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ. 

ಜು.29 ರಂದು ಈ ಘಟನೆ ನಡೆದಿದ್ದು, ತಡವಾಗಿ ವರದಿಯಾಗಿದೆ. ಬೇರೆ ಕೋಮಿಗೆ ಸೇರಿದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಮಹಿಳಾ ಉಪನ್ಯಾಸಕರು ಕಾರಿನಲ್ಲಿ ತೆರಳುತ್ತಿದ್ದಾಗ ಈ 5 ಮಂದಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದು, ಪ್ರಶ್ನೆ ಮಾಡಿ ಕಿರುಕುಳ ನೀಡಿದ್ದಾರೆ. 

ಸಂತೋಷ್ ನಂದಲಿಕೆ (29) ಕಾರ್ತಿಕ್ ಪೂಜಾರಿ (23) ಸುನಿಲ್ ಮೂಲ್ಯ (28)  ಸಂದೀಪ್ ಪೂಜಾರಿ (30) ಸುಜಿತ್ ಸಫಲಿಗ (28) ಬಂಧನಕ್ಕೊಳಗಾಗಿದ್ದ ಆರೋಪಿಗಳಾಗಿದ್ದಾರೆ. 

ಕುಂತಲಪಾಡಿಯಲ್ಲಿ ಕಾರನ್ನು ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ನಡೆಸುತ್ತಿದ್ದ ಬಗ್ಗೆ ಮಾಹಿತಿ ಬಂದ ಕೂಡಲೇ ಕಾರ್ಕಳ ಡಿವೈಎಸ್ ಪಿ ಅರವಿಂದ್ ಕಳಗುಜ್ಜಿ ಹಾಗೂ ತಂಡದ ಪೊಲೀಸ್ ಅಧಿಕಾರಿಗಳು 5 ಮಂದಿಯನ್ನು ಬಂಧಿಸಿದ್ದಾರೆ.

ಮಹಿಳಾ ಉಪನ್ಯಾಸಕಿಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಚಿಕ್ಕಮಗಳೂರಿನ ಕಳಸಾದಿಂದ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ. 5 ಮಂದಿಯನ್ನು ಬಂಧಿಸಿದ ನಂತರ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. 

SCROLL FOR NEXT