ರಾಜ್ಯ

ಕೈಗಾರಿಕೆಗಳು ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡಬೇಕು: ಸಿಎಂ ಸಿದ್ದರಾಮಯ್ಯ

Manjula VN

ಬೆಂಗಳೂರು: ಉದ್ಯಮ‌ ಕ್ಷೇತ್ರದ ಬೆಳವಣಿಗೆಗೆ ಮತ್ತು ಪ್ರಗತಿಗೆ ಅಗತ್ಯವಾದ ಎಲ್ಲಾ ಸಹಕಾರ ಮತ್ತು ನೆರವನ್ನು ನೀಡುತ್ತದೆ. ಕಾರ್ಪೋರೇಟ್ ಸಂಸ್ಥೆಗಳು ಮತ್ತು ಉದ್ಯಮ ಕ್ಷೇತ್ರ ಸರ್ಕಾರದ ಜತೆಗೆ ಸಮಾಜದ ಪ್ರಗತಿಗೆ ಕೈ ಜೋಡಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಮಾಜದ ಮತ್ತು ಉದ್ಯಮ ಕ್ಷೇತ್ರದ ಆರೋಗ್ಯಕರ ಪ್ರಗತಿಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ,ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಿಎಸ್‍ಆರ್ ಅನುದಾನವನ್ನು ಶಿಕ್ಷಣ, ಕೌಶಲ್ಯಾಭಿವೃದ್ಧಿಗೆ ಹೆಚ್ಚಾಗಿ ಬಳಕೆ ಮಾಡಬೇಕಿದೆ. ರಾಜ್ಯಸರ್ಕಾರ ತನ್ನ 3.28 ಲಕ್ಷ ಕೋಟಿ ರೂ. ಬಜೆಟ್‍ನಲ್ಲಿ ಶಿಕ್ಷಣಕ್ಕೆ 40 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಅದರಲ್ಲಿ ವೇತನ, ಸಾರಿಗೆ, ಪಿಂಚಣಿಗೆ ಹೆಚ್ಚು ಬಳಕೆಯಾಗುತ್ತಿದೆ. ಜೊತೆಗೆ ಮೂಲಸೌಕರ್ಯದ ಅಭಿವೃದ್ಧಿಗೂ ಹಣ ನೀಡುತ್ತಿದ್ದೇವೆ. ಆದರೆ ಅದರ ಪೂರೈಕೆಗಿಂತಲೂ ಬೇಡಿಕೆ ಮತ್ತು ಅಗತ್ಯತೆಗಳು ಹೆಚ್ಚಿವೆ. ಹೀಗಾಗಿ ಕಾರ್ಪೊರೇಟ್ ಸಂಸ್ಥೆಗಳ ಅಗತ್ಯವಿದೆ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಸರ್ಕಾರೇತರ ಸಂಸ್ಥೆಗಳು ಕೈ ಜೋಡಿಸಬೇಕು. 2013ರಲ್ಲಿ ಕಂಪನಿ ಕಾಯ್ದೆಗೆ ತಿದ್ದುಪಡಿ ತಂದು ಲಾಭಾಂಶದಲ್ಲಿ ಶೇ.2 ರಷ್ಟನ್ನು ಸಾಮಾಜಿಕ ಹೊಣೆಗಾರಿಕೆಗೆ ಬಳಕೆ ಮಾಡಬೇಕೆಂದು ನಿರ್ದೇಶಿಸಲಾಗಿದೆ. ಅದರಡಿ ಈಗಾಗಲೇ ಸಾಕಷ್ಟು ಅನುದಾನ ಬಳಕೆಯಾಗುತ್ತಿದೆ. ಮತ್ತಷ್ಟು ಸಂಸ್ಥೆಗಳು ಸರ್ಕಾರಿ ಶಾಲೆಗಳ ಸುಧಾರಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಎಲ್ಲರೂ ಶಿಕ್ಷಣ ಪಡೆದಾಗ ಸಾಮಾಜಿಕ, ಆರ್ಥಿಕ ಬೆಳವಣಿಗೆ ಸಾಧ್ಯ. ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣವಾಗುತ್ತದೆ. ಐತಿಹಾಸಿಕ ಕಾರಣದಿಂದಾಗಿ ಸಮಾಜದಲ್ಲಿ ಅಸಮಾನತೆ ಇದೆ. ಅದನ್ನು ತೊಡೆದು ಹಾಕಬೇಕಿದೆ. ಸ್ವಾತಂತ್ರ್ಯ ಬಂದ 75 ವರ್ಷ ಕಳೆದರೂ ನಮ್ಮಲ್ಲಿ ಸಾಕ್ಷರತೆ ಪ್ರಮಾಣ ಶೇ.76 ರಷ್ಟು ಮಾತ್ರ. ಇನ್ನು ಶೇ.24 ರಷ್ಟು ಮಂದಿ ಅನಕ್ಷರಸ್ಥರು ನಮ್ಮ ನಡುವೆ ಇದ್ದಾರೆ. ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ, ಶುದ್ಧ ಕುಡಿಯುವ ನೀರು, ಉದ್ಯೋಗ ಸಿಗುತ್ತಿಲ್ಲ. ಗುಡಿ ಕೈಗಾರಿಕೆಗಳು ಕ್ಷೀಣಿಸುತ್ತಿವೆ. ನಿರುದ್ಯೋಗ ಹೆಚ್ಚಾಗಿದೆ. ಕೃಷಿ ಭೂಮಿ ಹಿಡಿತ ಕಡಿಮೆಯಾಗಿರುವುದರಿಂದ ಜೀವನ ರೂಪಿಸಿಕೊಳ್ಳುವುದು ಕಷ್ಟಸಾಧ್ಯವಾಗಿ ನಗರಪ್ರದೇಶಗಳತ್ತ ವಲಸೆ ಬರುತ್ತಿದ್ದಾರೆ ಎಂದು ಹೇಳಿದರು.

ತಮ್ಮ ಸರ್ಕಾರ ಜಾಗತಿಕ ಮೂಲ ಆದಾಯ ಪರಿಕಲ್ಪನೆಯಡಿ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಬಡವ, ಶ್ರೀಮಂತ ಎಂಬ ಭೇದವಿಲ್ಲದೆ, ಎಲ್ಲಾ ಮಹಿಳೆಯರಿಗೂ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಪ್ರತೀದಿನ 80 ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ. ಆರ್ಥಿಕ ಚಟುವಟಿಕೆಗಳು ವೃದ್ಧಿಗೊಂಡು ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಲು ಸರ್ಕಾರ ಹೊಸ ಕಾರ್ಯಕ್ರಮವನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ ಎಂದು ಘೋಷಿಸಿದರು.

SCROLL FOR NEXT