ಉಡುಪಿ: ಕಾಲೇಜಿನ ವಾಷ್ ರೂಮ್ ನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ತಂಡ ಉಡುಪಿಗೆ ಆಗಮಿಸಿದೆ.
ರಾಜ್ಯ ಸರ್ಕಾರ ಪ್ರಕರಣವನ್ನು ಸೋಮವಾರದಂದು ಸಿಐಡಿಗೆ ಹಸ್ತಾಂತರಿಸಿತ್ತು. ಡಿವೈಎಸ್ ಪಿ ಅಂಜುಮಾಲ ನಾಯಕ್ ನೇತೃತ್ವದ ತಂಡ ಉಡುಪಿ ಜಿಲ್ಲಾ ಎಸ್ ಪಿ ಕಚೇರಿಗೆ ಭೇಟಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿದೆ.
ಎಸ್ ಪಿ ಅಕ್ಷಯ್ ಮಚ್ಚೀಂದ್ರ ಹಾಗೂ ಈ ವರೆಗೂ ತನಿಖಾಧಿಕಾರಿಯಾಗಿದ್ದ ಡಿವೈಎಸ್ ಪಿ ಬೆಳ್ಳಿಯಪ್ಪ ಅವರೊಂದಿಗೆ ಸಿಐಡಿ ತಂಡ ಚರ್ಚೆ ನಡೆಸಿದೆ. ಸಿಐಡಿ ತಂಡ ಸಂತ್ರಸ್ತೆ, ಆರೋಪಿ ವಿದ್ಯಾರ್ಥಿಗಳು ಮತ್ತು ಕಾಲೇಜು ಆಡಳಿತದ ಪ್ರತಿನಿಧಿಗಳಿಂದ ಸಾಕ್ಷ್ಯವನ್ನು ತೆಗೆದುಕೊಳ್ಳುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 19 ರಂದು ನಡೆದ ಈ ಘಟನೆಯು ರಾಜಕೀಯ ತಿರುವು ಪಡೆದುಕೊಂಡಿದ್ದು, ಇಲ್ಲಿನ ಪ್ಯಾರಾಮೆಡಿಕಲ್ ಕಾಲೇಜಿನ ವಾಷ್ ರೂಂನಲ್ಲಿ ವಿದ್ಯಾರ್ಥಿನಿಯರನ್ನು ಚಿತ್ರೀಕರಿಸಿದ ಮೂವರು ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪಟ್ಟಣದಲ್ಲಿ ಸರಣಿ ಪ್ರತಿಭಟನೆಗಳು ನಡೆದಿವೆ.