ಬಳ್ಳಾರಿ: ಬಿಸಿಲ ನಾಡು ಗಣಿ ಜಿಲ್ಲೆ ಬಳ್ಳಾರಿಯನ್ನು ಭಾರತದ ಜೀನ್ಸ್ ರಾಜಧಾನಿಯನ್ನಾಗಿ ಮಾಡುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಚುನಾವಣಾ ಪೂರ್ವ ನೀಡಿದ ಭರವಸೆ ನನಸಾಗುವತ್ತ ಒಂದು ಹೆಜ್ಜೆ ಮುಂದಿಟ್ಟಿದೆ. ಜಿಲ್ಲೆಯಲ್ಲಿ ಜೀನ್ಸ್ ಜವಳಿ ಪಾರ್ಕ್ ಸ್ಥಾಪಿಸಲು ಭೂಮಿಯನ್ನು ಆಯ್ಕೆ ಮಾಡುವಂತೆ ಕರ್ನಾಟಕ ಸರ್ಕಾರವು ಬಳ್ಳಾರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಜೀನ್ಸ್ ಜವಳಿ ಪಾರ್ಕ್ ನಿರ್ಮಿಸಲು ಜಾಗವನ್ನು ಪತ್ತೆ ಹಚ್ಚಿ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮತ್ತು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಸೂಚಿಸಿದ್ದಾರೆ.
ಕಳೆದ ಮೇ 10 ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ 5 ಗ್ಯಾರಂಟಿ ಭರವಸೆಗಳ ಹೊರತಾಗಿ, ಮಾಜಿ ಕಾಂಗ್ರೆಸ್ ಮುಖ್ಯಸ್ಥ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಅಪೆರಲ್ ಪಾರ್ಕ್ ಸ್ಥಾಪಿಸಲು 5,000 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು.
ಈ ಸಂಬಂಧ ರಾಹುಲ್ ಗಾಂಧಿ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಳ್ಳಾರಿಯ ಎಲ್ಲಾ ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಜಿಲ್ಲೆಯಲ್ಲಿ ಜಾರಿಯಾಗುತ್ತಿರುವ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಶಾಸಕ ನಾರಾ ಭರತ್ ರೆಡ್ಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತ್ಯೇಕ ಜವಳಿ ಪಾರ್ಕ್ ಮಾಡಬೇಕು ಎಂಬುದು ಜೀನ್ಸ್ ತಯಾರಕರ ಬಹುದಿನಗಳ ಬೇಡಿಕೆಯಾಗಿದೆ ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯನ್ನಾಗಿ ಮಾಡಲು ನಮ್ಮ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಂಡಿದೆ. ಬಳ್ಳಾರಿ ನಗರದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಸೂಕ್ತ ಜಾಗ ಹುಡುಕುವಂತೆ ಡಿಪಿಆರ್ ಸಿದ್ಧಪಡಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ನಾವು ಆದಷ್ಟು ಬೇಗ ವಿಸ್ತೃತ ಯೋಜನಾ ವರದಿ ಸಲ್ಲಿಸುತ್ತೇವೆ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಖಾಲಿ ಇರುವ ಸರ್ಕಾರಿ ಜಾಗ ಪಟ್ಟಿ ಸಿದ್ಧಪಡಿಸುತ್ತೇನೆ ಎಂದು ಶಾಸಕರು ತಿಳಿಸಿದರು. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿರುವ ಹಲವಾರು ಜೀನ್ಸ್ ತಯಾರಕರು ಇತ್ತೀಚಿನ ಬೆಳವಣಿಗೆಗಳಿಂದ ಸಂತೋಷಪಟ್ಟಿದ್ದಾರೆ. ಸರ್ಕಾರವು ಶೀಘ್ರದಲ್ಲೇ ಯೋಜನೆಯನ್ನು ಜಾರಿಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ನಾವು ಕಾಯುತ್ತಿದ್ದೇವೆ, ನಮ್ಮ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಇದು ಬಳ್ಳಾರಿಯನ್ನು ದೇಶದ ಜೀನ್ಸ್ ರಾಜಧಾನಿಯನ್ನಾಗಿ ಮಾಡುತ್ತದೆ ಎಂದು ಜೀನ್ಸ್ ತಯಾರಕರು TNIE ಗೆ ತಿಳಿಸಿದರು.