ರಾಜ್ಯ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ; ಮುಖ್ಯ ಇಂಜಿನಿಯರ್ ಸೇರಿ 9 ಇಂಜಿನಿಯರ್‌ಗಳಿಗೆ ಗಾಯ

Lingaraj Badiger

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಕೇಂದ್ರ ಕಚೇರಿಯ ಆವರಣದ ಕಟ್ಟಡವೊಂದರಲ್ಲಿ ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, 9ಕ್ಕೂ ಹೆಚ್ಚು ನೌಕರರು ಗಾಯಗೊಂಡಿದ್ದಾರೆ.

ಇಂದು ಸಂಜೆ ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್‌ ಮತ್ತು ಕಚೇರಿ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರೂ ಘಟನಾ ಸ್ಥಳಕ್ಕೆ ಅರ್ಧಗಂಟೆ ತಡವಾಗಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿಯನ್ನು ಸಂಪೂರ್ಣ ನಂದಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ.

ಘಟನೆಯಲ್ಲಿ ಬಿಎಂಪಿಯ 8ಕ್ಕೂ ಹೆಚ್ಚು ನೌಕರರಿಗೂ ಸುಟ್ಟು ಗಾಯಗಳಾಗಿದ್ದು, ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್‌ ಅವರು, ಇಂದು ಸಂಜೆ ಸಂಜೆ 5 ರಿಂದ 5.30 ರ ನಡುವೆ ಈ ಘಟನೆ ನಡೆದಿದೆ. ನಾನು ಕಛೇರಿಯಲ್ಲಿದ್ದೆ, ವಿದ್ಯುತ್ ವ್ಯತ್ಯಯವಾಗಿತ್ತು. ನಂತರ ನಮ್ಮ ಕಚೇರಿಯ ಹಿಂಭಾಗದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ನನಗೆ ತಿಳಿಯಿತು. ನಾನು ಅಲ್ಲಿಗೆ ಹೋದಾಗ, ಕಟ್ಟಡದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಿಂದ ಅಪಾರ ನಷ್ಟ ಸಂಭವಿಸಿದೆ. ಅಲ್ಲಿ ಕೆಲಸ ಮಾಡುತ್ತಿದ್ದವರು ಗಾಯಗೊಂಡಿದ್ದಾರೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಸೈಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗಕ್ಕೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಖ್ಯ ಇಂಜಿನಿಯರ್ ಸೇರಿದಂತೆ ಒಂಬತ್ತು ಇಂಜಿನಿಯರ್‌ಗಳಿಗೆ ಗಾಯಗಳಾಗಿವೆ ಎಂದು ಗಿರಿನಾಥ್ ಅವರು ತಿಳಿಸಿದ್ದಾರೆ.

SCROLL FOR NEXT