ಮಂಡ್ಯ: ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳು ಮತ್ತು ತಾಲ್ಲೂಕುಗಳಿಗೆ ನಿರಂತರ ವಿದ್ಯುತ್ ಪೂರೈಕೆಯ ಖಾತ್ರಿಗಾಗಿ ಹಂಪಾಪುರದಲ್ಲಿ 400 ಕೆವಿ ಸಾಮರ್ಥ್ಯದ ವಿದ್ಯುತ್ ಸರಬರಾಜು ಘಟಕ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸಿದರೆ ಮಾತ್ರ ಎಲ್ಲ ಗ್ರಾಮಗಳಿಗೆ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಾಧ್ಯ ಎಂದರು.
ಜಿಲ್ಲೆಯಲ್ಲಿ ಮಣ್ಣಿನ ಗುಣಮಟ್ಟ ಕಾಪಾಡಲು ಹಾಗೂ ಹಸಿರು ಹೊದಿಕೆ ಹೆಚ್ಚಿಸಲು ನಾಗಮಂಗಲ ತಾಲೂಕಿನ ಒಣಭೂಮಿ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಯೋಜನೆಯೊಂದನ್ನು ಜಾರಿಗೊಳಿಸಲಾಗುವುದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಜಾರಿಯಾಗಲಿದ್ದು, ಈ ಭಾಗದ ಎಲ್ಲ ರೈತರಿಗೆ ಸಂಪನ್ಮೂಲ ಮಾಹಿತಿ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದರು.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ಕ್ಯಾನ್ಸರ್ ಕೇಂದ್ರವನ್ನು ಮೇಲ್ದರ್ಜೆಗೇರಿಸಲು 11.75 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹೆಚ್ಚುವರಿ `2.64 ಕೋಟಿ ಅಗತ್ಯವಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಜಲಧಾರೆ ಯೋಜನೆಯಡಿ ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು 1,827 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ವಿಸಿ ಕಾಲುವೆ ಆಧುನೀಕರಣಕ್ಕೆ 300 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.