ರಾಜ್ಯ

ಪ್ರಗತಿಪರ ಸಾಹಿತಿಗಳಿಗೆ ಜೀವ ಬೆದರಿಕೆ ಗಂಭೀರವಾಗಿ ಪರಿಗಣಿಸಲಾಗುವುದು: ಗೃಹ ಸಚಿವ ಪರಮೇಶ್ವರ್

Lingaraj Badiger

ಬೆಂಗಳೂರು: ರಾಜ್ಯದ ಪ್ರಗತಿಪರ ಸಾಹಿತಿಗಳು ಮತ್ತು ಚಿಂತಕರಿಗೆ ಜೀವ ಬೆದರಿಕೆ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಬೆದರಿಕೆ ಎದುರಿಸುತ್ತಿರುವ ಸಾಹಿತಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸ್ ಕಮಿಷನರ್ ಮತ್ತು ಡಿಜಿಪಿಗೆ ಈಗಾಗಲೇ ಸೂಚಿಸಿದ್ದೇನೆ ಎಂದರು.

ಸಾಹಿತಿಗಳು ನನ್ನ ಭೇಟಿಗೆ ಸಮಯ ಕೇಳಿದ್ದು, ಅವರನ್ನು ಭೇಟಿ ಮಾಡುತ್ತೇನೆ. ಬೆದರಿಕೆ ಪತ್ರವನ್ನು ಡಿಜಿಪಿಗೆ ಕಳುಹಿಸಲಾಗುವುದು. ಪ್ರಗತಿಪರ ಚಿಂತಕರು ಹಾಗೂ ಹೋರಾಟಗಾರರಾದ ಗೌರಿ ಲಂಕೇಶ್ ಮತ್ತು ಪ್ರೊ.ಎಂ.ಎಂ.ಕಲಬುರ್ಗಿ ಹತ್ಯೆಯನ್ನು ನಾವು ಮರೆತಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂತಹ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರನ್ನು ಒಮ್ಮೆ ಭೇಟಿ ಮಾಡಿದರೆ ಬೆದರಿಕೆಯ ನಿಖರ ಮಾಹಿತಿ ತಿಳಿಯಲಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಸುಮಾರು 15ಕ್ಕೂ ಹೆಚ್ಚು ಪ್ರಗತಿಪರ ಸಾಹಿತಿಗಳು ಹಾಗೂ ಚಿಂತಕರ ಹೆಸರು ಬರೆದು ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಕೋಮುವಾದ, ಜಾತಿವಾದ, ಮೌಡ್ಯವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. 

ಪ್ರೊ ಕೆ ಮರಳಸಿದ್ದಪ್ಪ, ಪ್ರೊ ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ ವಿರಭದ್ರಪ್ಪ ಸೇರಿದಂತೆ ಒಟ್ಟು 15 ಜನ ಲೇಖಕರು ಹಾಗೂ ಸಾಹಿತಿಗಳಿಗೆ ಬೆದರಿಕೆ ಪತ್ರ ಬಂದಿದೆ. ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್​ ಅವರಿಗೆ ಪತ್ರ ಬರೆದಿದ್ದು, ಸಾಹಿತಿ ಲೇಖರ ಮೇಲಿನ ಜೀವ ಬೆದರಿಕೆ ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಈ ಬಗ್ಗೆ ಚರ್ಚೆಗೆ ಅವಾಕಶ ನೀಡಿ ಎಂದು ಬುದ್ಧಿಜೀವಿಗಳು ಮನವಿ ಮಾಡಿದ್ದಾರೆ.

SCROLL FOR NEXT