ರಾಜ್ಯ

ರಸ್ತೆ ಬದಿಯಲ್ಲಿ ಇಟ್ಟಿದ್ದ 1500 ಎಳನೀರು ಕಳ್ಳತನ: ಖದೀಮರ ಸುಳಿವು ನೀಡಿದ ಟೀ ಅಂಗಡಿ ಗೂಗಲ್‌ ಪೇ ಸ್ಕ್ಯಾನರ್‌!

Manjula VN

ಬೆಂಗಳೂರು: ರಸ್ತೆ ಬದಿಯಲ್ಲಿ ಇರಿಸಲಾಗಿದ್ದ 1500 ಎಳನೀರನ್ನು ಕದ್ದೊಯ್ದಿದ್ದ ಮೂವರು ಖದೀಮರನ್ನು ಜಯನಗರ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ರಘು, ಮಣಿಕಂಠ ಮತ್ತು ಗೌತಮ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಆಗಸ್ಟ್ 7 ರಂದು ಜಯನಗರದ ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣದ ಬಳಿ ಸುಮಾರು 1500 ಎಳನೀರನ್ನು ಕಳವು ಮಾಡಿದ್ದರು. ಈ ಸಂಬಂಧ ತೆಂಗಿನಕಾಯಿ ಮಾರಾಟಗಾರ ಸಲೀಂ ಪೊಲೀಸರಿಗೆ ದೂರು ನೀಡಿದ್ದರು.

ಜಯನಗರ 4ನೇ ‘ಬ್ಲಾಕ್‌ನ ಸುದರ್ಶನ ಪಾರ್ಕ್‌ ಬಳಿಯೂ ಈ ಹಿಂದೆ 1300 ಎಳನೀರು ಕಳ್ಳತನವಾಗಿತ್ತು. ಜೂನ್ ತಿಂಗಳಿನಲ್ಲಿ ಎಳನೀರು ಮಾರಾಟಗಾರ ಚಿಕ್ಕಮರಿಗೊಂಡ ಎಂಬುವವರು ದೂರು ದಾಖಲಿಸಿದ್ದರು.

ಒಂದೇ ರೀತಿಯ ಎರಡು ಪ್ರಕರಣಗಳು ದಾಖಲಾಗಿದ್ದನ್ನು ಗಮನಿಸಿದ ಪೊಲೀಸರು ಖದೀಮರಿಗಾಗಿ ಹುಡುಗಾಟ ಆರಂಭಿಸಿದ್ದರು.

ಎಳನೀರನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳು, ಅವುಗಳನ್ನು ಟೆಂಪೋ ಟ್ರಾವೆಲರ್‌ಗಳಲ್ಲಿ ಸಾಗಿಸುತ್ತಿದ್ದರು. ಸುತ್ತಮುತ್ತಲಿನ ಸಿಸಿಟಿವಿಗಳು ಪೊಲೀಸರಿಗೆ ಯಾವುದೇ ಸುಳಿವು ನೀಡಬಾರದು ಎಂಬ ಉದ್ದೇಶದಿಂದ ನಂಬರ್ ಪ್ಲೇಟ್‌ಗಳಿಗೆ ಕಪ್ಪು ಬಣ್ಣ ಬಳಿಯುತ್ತಿದ್ದರು. ಅಲ್ಲದೆ, ಸರ್ಜಿಕಲ್ ಮಾಸ್ಕ್ ಧರಿಸಿ, ತಮ್ಮ ಗುರುತು ಪತ್ತೆಯಾಗದಂತೆ ನೋಡಿಕೊಳ್ಳುತ್ತಿದ್ದರು.

ಪ್ರಕರಣದ ಸಂಬಂಧ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆಗಿಳಿದ ಪೊಲೀಸರು ಸುಮಾರು 60 ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಎಳನೀರು ಸಾಗಿಸುತ್ತಿದ್ದ ಆರೋಪಿಗಳು, ರಸ್ತೆ ಬದಿಯ ಟೀ ಅಂಗಡಿಯಲ್ಲಿ ಚಹಾ ಕುಡಿಯುತ್ತಿರುವುದು ಕಂಡುಬಂದಿತ್ತು.

ಈ ವೇಳೆ ಟೀ ಮಾರಾಟಗಾರನಿಗೆ ನೀಡಲು ಹಣವಿಲ್ಲದೆ, ಯುಪಿಐ ಮೂಲಕ ಹಣ ಪಾವತಿ ಮಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದರು. ನಂತರ ಟೀ ಮಾರಾಟಗಾರರ ಬಳಿಗೆ ಹೋಗಿ ಆರೋಪಿಗಳು ಪಾವತಿ ಮಾಡಿದ ಫೋನ್ ಸಂಖ್ಯೆಯ ವಿವರಗಳನ್ನು ಸಂಗ್ರಹಿಸಿದರು. ಇದು ಆರೋಪಿಗಳ ಬಂಧನಕ್ಕೆ ಸಾಕಷ್ಟು ನೆರವು ನೀಡಿತ್ತು.

ಆರೋಪಿಗಳು ಕದ್ದ ಎಳನೀರನ್ನು ನಗರದ ಹೊರವಲಯದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT