ಮಂಡ್ಯ: ನೆರೆ ರಾಜ್ಯ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿ ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಮಾಡಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ ರಾಜ್ಯ ಬಿಜೆಪಿ ಮಂಡ್ಯದ ಸಂಜಯ್ ವೃತ್ತದಲ್ಲಿ ಸೋಮವಾರ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದೆ.
ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಸಂಜಯ್ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ಸಂಸದೆ ಸುಮಲತಾ ಮಾಜಿ ಸಿಎಂ ಸದಾನಂದಗೌಡ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ.
ಪ್ರತಿಭಟನೆ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದಾರೆ.
ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನೂ ಓದಿ: ಕಾವೇರಮ್ಮಾ,. ಕಾಪಾಡಮ್ಮಾ.. ಇನ್ನೆರಡು ವಾರದಲ್ಲಿ ಉತ್ತಮ ಮಳೆಯಾಗದಿದ್ದರೆ ಪರಿಸ್ಥಿತಿ ಪ್ರಕ್ಷುಬ್ದ; ಮರುಕಳಿಸುತ್ತಾ ಇತಿಹಾಸ?
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಯಾರನ್ನೂ ಕೇಳದೆ ಈಗಾಗಲೇ 8 ಟಿಎಂಸಿ ಅಡಿ ನೀರು ಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ್ ಅವರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸಂಚಾರಕ್ಕೆ ತೀವ್ರ ಅಡೆತಡೆಗಳು ಉಂಟಾಗುವ ಹಿನ್ನೆಲೆಯಲ್ಲಿ ಸಂಜಯ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆಂದು ಹೇಳಿದರು.
ಬಳಿಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಂಡ್ಯ ಮದ್ದೂರಿನಲ್ಲಿ ನಮ್ಮ ಬೆಳೆಗಳಿಗೇ ನೀರಿಲ್ಲದಂತಾಗಿದೆ. ಹೀಗಿರುವಾಗ ನೆರೆ ರಾಜ್ಯ ತಮಿಳುನಾಡಿಗೆ ಹೇಗೆ ನೀರು ಬಿಡುಗಡೆ ಮಾಡುತ್ತಾರೆಂಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರಕ್ಕೆ ನಮ್ಮ ರಾಜ್ಯದ ರೈತರ ಹಿತ ಬೇಕಾಗಿಲ್ಲ. ವಾಸ್ತವ ಸ್ಥಿತಿಯನ್ನು ಕೋರ್ಟ್‍ಗೆ ಅರ್ಥ ಮಾಡಿಸದೇ ನೀರು ಬಿಟ್ಟಿದ್ದಾರೆ. ತಮಿಳುನಾಡು ಅರ್ಜಿ ಹಾಕಿದ ತಕ್ಷಣವೇ ನೀರು ಬಿಡುವ ಅಗತ್ಯ ಏನಿತ್ತು? ಲೋಕಸಭಾ ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್ ರೈತರ ಹಿತ ಬಲಿಕೊಡುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಪ್ರತಿಭಟನೆ ವೇಳೆ ಕಿವಿಗೆ ಹೂ ಇಟ್ಟುಕೊಂಡು, ಬಾಯಿ ಬಡಿದುಕೊಂಡು ತಮಿಳಿನಾಡಿಗೆ ನೀರು ಹರಿಸುವುದನ್ನು ನಿಲ್ಲುಸುವಂತೆ ಕಾರ್ಯಕರ್ತರು ಘೋಷಣೆ ಕೂಗಿದರು.
ಕೆಲ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರಸ್ತೆ ಮಧ್ಯೆ ಬೆಂಕಿ ಹಾಕಿ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಪ್ರಯತ್ನವನ್ನೂ ಮಾಡಿದರು.